ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಸುರತ್ಕಲ್ ಸಮೀಪದ ತಡಂಬೈಲು ಮಾರಿಗುಡಿ ಬಳಿ ಇಂದು ಮುಂಜಾನೆ ನಡೆದಿದೆ. ಅಪಘಾತಕ್ಕೆ ಕಾರು ನಜ್ಜುಗುಜ್ಡಾಗಿದ್ದರೂ ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ಕಾರಿನಲ್ಲಿ ಓರ್ವ ಯುವಕ ಮತ್ತು ಇಬ್ಬರು ಯುವತಿಯರು ಉಡುಪಿ ಕಡೆಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದರು. ಬೆಳಗ್ಗಿನ ಜಾವ 3:30ರ ಸುಮಾರಿಗೆ ತಡಂಬೈಲು ಮಾರಿಗುಡಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.
ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ವಿಭಜಕಕ್ಕೆ ಢಿಕ್ಕಿ ಹೊಡೆದು ಹೆದ್ದಾರಿಯ ಇನ್ನೊಂದು ಪಾರ್ಶ್ವವನ್ನು ದಾಟಿ ರಸ್ತೆ ಬದಿಯ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಕ್ರಗಳು ಸ್ಫೋಟಗೊಂಡು ಛಿಧ್ರವಾಗಿವೆ.
ಢಿಕ್ಕಿಯ ರಭಸಕ್ಕೆ ಕಟ್ಟಡಕ್ಕೂ ಹಾನಿಯಾಗಿದೆ. ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.