ಬ್ರಹ್ಮಾವರ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರೂರಿನಲ್ಲಿ ಮದುವೆ ಮಂಟಪದಲ್ಲೇ ಮದುವೆಯೊಂದು ಮುರಿದು ಬಿದ್ದಿದೆ. ಇಲ್ಲಿಗೆ ಸಮೀಪದ ಸಭಾಭವನದಲ್ಲಿ ತಾಳಿ ಕಟ್ಟುವ ವೇಳೆ ವಧು ತನಗೆ ಈ ಮದುವೆ ಇಷ್ಟವಿಲ್ಲ ಎಂದು ಹಠ ಹಿಡಿದಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ. ವಧು ಮೂಲತಃ ಬ್ರಹ್ಮಾವರದವರಾಗಿದ್ದು, ವರ ವಿದೇಶದಲ್ಲಿ, ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಸುಮಾರು 4 ತಿಂಗಳ ಹಿಂದೆ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು.
ಮದುವೆ ದಿನ ಮದುವೆ ಕ್ರಮಗಳೆಲ್ಲ ನಡೆದು ತಾಳಿ ಕಟ್ಟುವ ಸಂದರ್ಭ ಬಂದಾಗ ವಧು, ವರನನ್ನು ಅಲ್ಲಿಯೇ ಕೊಠಡಿಗೆ ಕರೆದುಕೊಂಡು ಹೋಗಿ ತನಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಮದುವೆಗೆ ಬಂದವರು ಇದೇನು ಧಾರಾವಾಹಿಯೋ ಸಿನೆಮಾವೋ ಎಂದು ಅಂದುಕೊಳ್ಳುತ್ತಿರುವಾಗಲೇ ಎರಡೂ ಕಡೆಯ ಹಿರಿಯರು ಮಾತುಕತೆ ನಡೆಸಿದ್ದಾರೆ. ಕೊನೆಗೆ ವಧುವಿಗೆ ಇಷ್ಟ ಇಲ್ಲದಿದ್ದರೆ ಮದುವೆ ಬೇಡ ಎಂಬ ನಿರ್ಧಾರಕ್ಕೆ ವರನ ಕಡೆಯವರೂ ಬಂದಿದ್ದಾರೆ. ಆದರೆ ಮದುವೆಗೆ ಲಕ್ಷಾಂತರ ರೂ ಖರ್ಚು ಮಾಡಲಾಗಿತ್ತು. ಕೊನೆಗೆ ಬ್ರಹ್ಮಾವರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಖರ್ಚಿನ ಸಮಪಾಲು ಹಾಕಲು ಒಪ್ಪುವುದರೊಂದಿಗೆ ಪ್ರಕರಣ ಮುಕ್ತಾಯಗೊಂಡಿತು.