ಮೂಡುಬಿದಿರೆ: ನಾಟಕ, ಯಕ್ಷಗಾನ ವೇಷ ಭೂಷಣಗಳ ತಯಾರಕ, ಕಲಾವಿದ ಬೊಕ್ಕಸ ಜಗನ್ನಾಥ ರಾವ್ (76) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಮೂಡುಬಿದಿರೆ ಚೌಟರ ಅರಮನೆಯ ಬೊಕ್ಕಸದ ಲೆಕ್ಕ ಬರೆಯುತ್ತಿದ್ದ ವಂಶದ ಕುಡಿಯಾಗಿರುವ ಬೊಕ್ಕಸ ಜಗನ್ನಾಥ ರಾವ್ ಅವರು ತನ್ನ 12ನೇ ವಯಸ್ಸಿನಿಂದಲೇ ತನ್ನ ತಂದೆಯ ಜತೆಗೂಡಿ ಟೈಲರಿಂಗ್ ಜತೆಗೆ ವೇಷಭೂಷಣ ಹೊಲಿಯುವ, ಮಣಿಸರಕು ಪೋಣಿಸುವ, ಕಿರೀಟಾದಿ ತಯಾರಿಸುವ ಕಲೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಲಾವಿದರಾಗಿದ್ದ ಮೂಡುಬಿದಿರೆ ದಿ.ಲಾಡಿ ಕೃಷ್ಣ ಶೆಟ್ಟಿ ಅವರು ಸುದೀರ್ಘ ಕಾಲ ತಮ್ಮ ಮೇಕಪ್ ಕೈಯಾಗಿದ್ದರು. ಕುರಿಯ ವಿಠಲ ಶಾಸ್ತ್ರಿಯವರ ಒಡನಾಟದಿಂದಾಗಿ ಧರ್ಮಸ್ಥಳ ಮೇಳದ ಸಂಪರ್ಕ ಲಭಿಸಿ ಮೇಳಕ್ಕೆ ಪ್ರಥಮವಾಗಿ ವೇಷಭೂಷಣ ತಯಾರಿಸಿಕೊಟ್ಟಿದರು. ಬೇತಾಳದ ವೇಷ, ಛದ್ಮವೇಷ, ಮೆರವಣಿಗೆಗೆ ಬೇಕಾದ ವೇಷಭೂಷಣಣಗಳನ್ನು ತಯಾರಿಸುವಲ್ಲಿ, ಮಕ್ಕಳ ವೇಷ, ಮದುವೆ ಮಂಟಪದ ನಿರ್ಮಾಣ ಆಲಂಕಾರದಲ್ಲಿ ಗಮನ ಸೆಳೆದಿದ್ದರು. ನೇಪಥ್ಯ ಕಲಾವಿದರಾಗಿ ಆರು ದಶಕಗಳಿಗೂ ಮಿಗಿಲಾದ ಅನುಭವ, ಭಾರತದಾದ್ಯಂತ ತಿರುಗಾಟ ನಡೆಸಿದವರು. ಶೇಣಿ, ಸಾಮಗರು, ಕುಂಬ್ಳೆ, ಎಂಪೆಕಟ್ಟೆ, ಪುತ್ತೂರು ನಾರಾಯಣ ಹೆಗ್ಡೆ ಸಹಿತ ಹಲವು ಕಲಾವಿದರ ನಿಕಟ ಸಂಪರ್ಕವನ್ನು ಹೊಂದಿದ್ದರು. , ಶಾಲೆ, ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ, ಕಲಾಸಂಘಗಳ ಆಟಗಳಲ್ಲಿ ತಮ್ಮ ವೇಷಭೂಷಣಗಳು ಮೆರೆದಿದೆ. ಮೂಡುಬಿದಿರೆಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಸಹಿತ ಹಲವಾರು ಕಡೆಗಳಲ್ಲಿ ಸನ್ಮಾನಕ್ಕೆ ಪಾತ್ರರಾಗಿದ್ದರು. ಮೂಡುಬಿದಿರೆಯ ನಾಗರಕಟ್ಟೆಯಲ್ಲಿ ವಾಸವಾಗಿದ್ದ ಅವರು ಪತ್ನಿ ಸತ್ಯವತಿ ಸಹಿತ ಸಹೋದರರನ್ನು ಅಗಲಿದ್ದಾರೆ.
©2021 Tulunada Surya | Developed by CuriousLabs