Friday, March 29, 2024
spot_img
More

    Latest Posts

    ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆಗೆ ಮುಂದಾದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್

    ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಬೇಸರದಲ್ಲಿ ವಿಧಾನ ಪರಿಷತ್ತಿನ ಸಭಾನಾಯಕ ಬಿಕೆ ಹರಿಪ್ರಸಾದ್ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

    ವಿಧಾನ ಪರಿಷತ್ ಮತ್ತು ಸಭಾನಾಯಕ ಹುದ್ದೆಗೆ ರಾಜಿನಾಮೆ ನೀಡುವ ಬಗ್ಗೆ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಶಾಸಕ ಯುಟಿ ಖಾದರ್ ವಿಧಾನಸಭೆ ಸ್ಪೀಕರ್ ಆಗಿರುವುದರಿಂದ ಬಿಕೆ ಹರಿಪ್ರಸಾದ್ ಸಚಿವ ಸ್ಥಾನಕ್ಕೇರುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗಿತ್ತು.

    ಆದರೆ ಕೊನೆಕ್ಷಣದಲ್ಲಿ ಯಾವುದೇ ಎಂಎಲ್ಸಿಗೂ ಸಚಿವ ಸ್ಥಾನ ನೀಡದೇ ಇರುವ ತೀರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿರುವುದು ಬಿಕೆ ಹರಿಪ್ರಸಾದ್ ಆಸೆಗೆ ತಣ್ಣೀರು ಎರಚಿದಂತಾಗಿದೆ. ರಾತ್ರಿ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ದೆಹಲಿಯಿಂದ ಬಂದ ನಂತರ ಅವರೊಂದಿಗೆ ಚರ್ಚಿಸಿ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರಕ್ಕೆ ಬಿಕೆ ಹರಿಪ್ರಸಾದ್ ಬರಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ರಾಜ್ಯಸಭೆ ಸದಸ್ಯರಾಗಿದ್ದು, ಎಐಸಿಸಿ ಕಾರ್ಯದರ್ಶಿಯಾಗಿ ಹೈಕಮಾಂಡ್ ಮಟ್ಟದಲ್ಲಿ ಕಾರ್ಯ ನಿರ್ವಹಿಸಿದ್ದ ಬಿಕೆ ಹರಿಪ್ರಸಾದ್ ಅವರನ್ನು ಎರಡು ವರ್ಷದ ಹಿಂದೆ ರಾಜ್ಯಕ್ಕೆ ತಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಮಾಡಲಾಗಿತ್ತು.

    ಹಿಂದುಳಿದ ವರ್ಗದ ಸಿದ್ದರಾಮಯ್ಯ ಸಮಾನವಾಗಿ ಮತ್ತೊಬ್ಬ ಓಬಿಸಿ ವರ್ಗದ ವ್ಯಕ್ತಿಯನ್ನು ವಿಧಾನ ಪರಿಷತ್ತಿನಲ್ಲಿ ಸಭಾ ನಾಯಕರನ್ನಾಗಿ ಮಾಡಿದ್ದು ಡಿಕೆಶಿ ತಂತ್ರವಾಗಿದ್ದರೆ, ಬಿಕೆ ಜೊತೆಗೆ ಅಂತರ ಕಾಯ್ದುಕೊಂಡಿದ್ದ ಸಿದ್ದರಾಮಯ್ಯ ಈಗ ಸಚಿವ ಸ್ಥಾನದ ವಿಷಯದಲ್ಲಿ ಗುನ್ನಾ ಇಟ್ಟಿದ್ದಾರೆಂದೇ ಹೇಳಲಾಗುತ್ತಿದೆ. ಇದರಿಂದ ಬಿಕೆ ಹರಿಪ್ರಸಾದ್ ತೀವ್ರ ಬೇಸರಗೊಂಡಿದ್ದಾರೆಂದು ಆಪ್ತರ ಮೂಲಗಳು ತಿಳಿಸಿವೆ. ಹರಿಪ್ರಸಾದ್ ಬದಲು ಎಐಸಿಸಿ ಸೆಕ್ರೆಟರಿಯಾಗಿದ್ದ ಎನ್.ಎಸ್. ಬೋಸರಾಜು ಅವರನ್ನು ಸಚಿವರನ್ನಾಗಿ ಮಾಡಿದ್ದು ಅವರೇ ಪರಿಷತ್ ಸದಸ್ಯರಾಗಿ ಸಭಾನಾಯಕ ಹುದ್ದೆಗೇರಲಿದ್ದಾರೆ ಎಂಬ ಮಾಹಿತಿಯಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss