ಮಂಗಳೂರು: ‘ಸಾಧನ ಶೀಲ ಕಲಾವಿದರ ಹೆಸರಿನೊಂದಿಗೆ ಅವರ ಮನೆತನದ ಅಥವಾ ಊರಿನ ಹೆಸರು ಸೇರಿಕೊಂಡಿರುತ್ತದೆ. ಇದು ಅಂಥವರ ಸಮಗ್ರ ಕುಟುಂಬಕ್ಕೆ ಸಲ್ಲುವ ಗೌರವ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಈ ನಿಟ್ಟಿನಲ್ಲಿ ಮಾದರಿಯಾಗಿ ನಿಲ್ಲುತ್ತಾರೆ. ಅವರ ಸುಪುತ್ರ ಯಕ್ಷಾಂಗಣದೊಂದಿಗೆ ಕೈಜೋಡಿಸಿ ಬಾಳಪ್ಪ ಶೆಟ್ಟರ ಸಂಸ್ಮರಣೆ ನಡೆಸುತ್ತಿರುವುದು ಅಭಿನಂದನೀಯ’ ಎಂದು ನಗರದ ಶ್ರೀ ರಾಮಕೃಷ್ಣ ಕೋ – ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಜೈರಾಜ್ ಬಿ.ರೈ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬದಲ್ಲಿ ನವೆಂಬರ್ 22 ರಂದು ಯಕ್ಷಗಾನದ ಪ್ರಸಿದ್ಧ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟರ ಸಂಸ್ಮರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿ ದಿವಂಗತ ಬಾಳಪ್ಪ ಶೆಟ್ಟರ ಬದುಕು ಮತ್ತು ಸಾಧನೆಯನ್ನು ಪರಿಚಯಿಸಿದರು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದಲ್ಲಿ ತಾನು ಅವರೊಂದಿಗೆ ದುಡಿದ ದಿನಗಳನ್ನು ಸ್ಮರಿಸಿದರು.
ಬೈಪಾಡಿತ್ತಾಯ ದಂಪತಿಗೆ ಸಮ್ಮಾನ:
ಸಮಾರಂಭದಲ್ಲಿ ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಲೀಲಾವತಿ ಬೈಪಾಡಿತ್ತಾಯ ದಂಪತಿಯನ್ನು ಸನ್ಮಾನಿಸಲಾಯಿತು. ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ಅವರಿಗೆ ‘ಬಾಳಪ್ಪ ಶೆಟ್ಟಿ ಪ್ರಶಸ್ತಿ -2023’ ಯನ್ನು ಗೌರವ ನಿಧಿಯೊಂದಿಗೆ ನೀಡಿ ಗೌರವಿಸಲಾಯಿತು.ಮುಂಬೈ ಉದ್ಯಮಿ ಬಾಬು ಶೆಟ್ಟಿ ಪೆರಾರ ಪ್ರಶಸ್ತಿ ಪ್ರದಾನ ಮಾಡಿದರು. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆಗೈದರು. ಶ್ಯಾಮಲಾ ಪದ್ಮನಾಭ ಶೆಟ್ಟಿ ಪ್ರಶಸ್ತಿ ಪತ್ರ ವಾಚಿಸಿದರು.
ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು, ರವೀಂದ್ರ ರೈ ಕಳ್ಳಿಮಾರು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ, ಬೆಟ್ಟಂಪಾಡಿ ಪದ್ಮನಾಭ ಶೆಟ್ಟಿ, ಡಾ.ಸೂರಜ್ ಸುಂದರ್ ಶೆಟ್ಟಿ, ಸುಮಾಪ್ರಸಾದ್ ವೇದಿಕೆಯಲ್ಲಿದ್ದರು.
ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥಿಸಿದರು. ನಿವೇದಿತಾ ಎನ್.ಶೆಟ್ಟಿ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ಸುಧಾಕರ ರಾವ್ ಪೇಜಾವರ ವಂದಿಸಿದರು.
ಇತ್ತೀಚೆಗೆ ನಿಧನರಾದ ಕೈರಂಗಳ ನಾರಾಯಣ ಹೊಳ್ಳ ಮತ್ತು ಪಿ.ವಿ.ರಾವ್ ಪೇಜಾವರ ಅವರಿಗೆ ಯಕ್ಷಾಂಗಣ ವತಿಯಿಂದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.