ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಚಿತ್ರದುರ್ಗ ಮುರುಘಾ ಮಠದಿಂದ ಮರಣೋತ್ತರವಾಗಿ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುರುಘಾರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ದಿ.ಪುನೀತ್ ಅವರ ಪರವಾಗಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪುರಸ್ಕಾರ ಸ್ವೀಕರಿಸಿದರು.
ಬಸವಶ್ರೀ ಪ್ರಶಸ್ತಿ ಐದು ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನು ಒಳಗೊಂಡಿದೆ. ಮುರುಘಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು.
ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ನಟ ಪುನೀತ್ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡುವ ಮೂಲಕ ಅವರ ಇಡೀ ಕುಟುಂಬಕ್ಕೆ ಮಧ್ಯ ಕರ್ನಾಟಕದಿಂದ ಗೌರವಿಸುವ ಕೆಲಸ ಮಾಡಲಗಿದೆ ಎಂದರು.
ರಾಜಕುಮಾರ್ ಮುದ್ದಿನ ಮಗ ಪುನೀತ್. ಬೆಳ್ಳಿ ತೆರೆಯಲ್ಲಿ ನಟಿಸಿದ ಮಹಾನ್ ಪ್ರತಿಭಾವಂತ. ಅಭಿನಯ-ಅಭಿವ್ಯಕ್ತಿ-ಹಾಡುಗಾರಿಕೆಯಲ್ಲಿ ಅವರು ಪುನೀತ. ತಂದೆಯ ಸ್ಪೂರ್ತಿ ಇಟ್ಟುಕೊಂಡು ಆಕಾಶದೆತ್ತರಕ್ಕೆ ಬೆಳೆದವರು, ಇಂತಹ ಪ್ರತಿಭಾವಂತರನ್ನು ಪಡೆದ ಕನ್ನಡನಾಡು ಮಾನ್ಯ, ನಾವೆಲ್ಲರೂ ಧನ್ಯ ಎಂದರು.
