ಬಂಟ್ವಾಳ:ತೀರಾ ಬಡತನದಿಂದ ರೋಸಿ ಹೋಗಿ, 18 ವರ್ಷದ ಚಿರ ಯೌವನದಲ್ಲಿ ತನ್ನ ತಂದೆ ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ತೊರೆದು ಮನೆ ಬಿಟ್ಟು ಹೋದ ಯುವಕ ಬರೋಬ್ಬರಿ 26 ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಿದ ರೋಚಕ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಆದರೆ ದುರಾದೃಷ್ಟವೆಂದರೆ ತನ್ನ ತಂದೆ ತಾಯಿಯನ್ನು ಅಂತಿಮ ಕ್ಷಣದಲ್ಲಾದರೂ ನೋಡುವ ಭಾಗ್ಯವನ್ನು ಈತ ಕಳೆದುಕೊಂಡಿದ್ದಾನೆ. ಮೂರು ತಿಂಗಳ ಮುಂಚೆ ಮನೆ ಸೇರಿದ್ದರೆ ತನ್ನ ತಂದೆತಾಯಿಯನ್ನು ನೋಡಬಹುದಿತ್ತು. ಈತನ ತಂದೆ – ತಾಯಿ ಇಬ್ಬರೂ ಮೂರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದಾರೆ.
ಬಂಟ್ವಾಳ ಮಾರಿಪಳ್ಳದ ಬಸ್ ನಿಲ್ದಾಣದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ಶಿವಪ್ಪ ಪೂಜಾರಿ(೪೪)ಯನ್ನು ಸಹೃದಯಿಗಳು ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆಳಾಲುನಲ್ಲಿರುವ ಓಡಿಪ್ರೊಟ್ಟು ಮನೆ ಸೇರಿದ್ದಾನೆ.
ಕೊರಗಪ್ಪ ಪೂಜಾರಿಯವರ ಹಿರಿಯ ಪುತ್ರ ಶಿವಪ್ಪ 26 ವರ್ಷದ ಹಿಂದೆ ಮನೆ ತೊರೆದು ಮಂಗಳೂರು ನಗರಕ್ಕೆ ಬಂದು ಎರಡು ವರ್ಷ ಕೆಲಸ ಮಾಡಿದ್ದ. ಆ ಸಂದರ್ಭ ಮನೆಯವರೊಂದಿಗೆ ಸಂಪರ್ಕ ಹೊಂದಿದ್ದ. ಆ ನಂತರದ ವರ್ಷಗಳಲ್ಲಿ ಮನೆಯವರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ತಂದೆ – ತಾಯಿ ಸಾಕಷ್ಟು ಹುಡುಕಾಡಿದರೂ ಮಗನ ಸಂಪರ್ಕ ಸಾಧ್ಯವಾಗಿಲ್ಲ. ಕೊನೇ ತನಕ ಮಗನನ್ನು ಪುನಃ ಕಾಣುವ ಭಾಗ್ಯ ಅವರಿಗೆ ಲಭಿಸಲೇ ಇಲ್ಲ.
ಮಂಗಳೂರಿನ ಉದ್ಯೋಗ ತೊರೆದ ಶಿವಪ್ಪಮ ಉದ್ಯೋಗವನ್ನು ಹುಡುಕಿ ತರಿಕೆರೆ, ಮೈಸೂರಿನತ್ತ ತೆರಳಿ ಅಲ್ಲಿಯೇ ಹೊಸ ಜೀವನವನ್ನು ಆರಂಭಿಸಿದ. ಅಲ್ಲಿಯ ಮೀನಾಕ್ಷಿ ಎಂಬವರೊಂದಿಗೆ ವಿವಾಹವಾಗಿ, ಓರ್ವ ಪುತ್ರ ಹಾಗೂ ಪುತ್ರಿಯೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದನಾದರೂ ತನ್ನ ತಂದೆ-ತಾಯಿಯನ್ನು ಮರಳಿ ಭೇಟಿಯಾಗುವ ಧೈರ್ಯ ಬರಲೇ ಇಲ್ಲ.
ಆದರೆ ಕೊರೋನಾದಿಂದ ಉದ್ಯೋಗ ಕಳೆದುಕೊಂಡ ಶಿವಪ್ಪನಿಗೆ ಪುನಃ ಬಡತನದ ನೆನಪಾಗಿ ತನ್ನ ಹುಟ್ಟೂರಿಗೆ ಮರಳಲೇ ಬೇಕಾಯಿತು. ಹೀಗೆ ತಾಯ್ನಾಡಿಗೆ ಹೊರಟ ಶಿವಪ್ಪ ಬಂಟ್ವಾಳದ ಮಾರಿಪಳ್ಳ ಬಸ್ ನಿಲ್ದಾಣದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ. ಇದನ್ನು ಕಂಡ ಸ್ಥಳೀಯರು ಆತನ ಆರೈಕೆ ಮಾಡಿ, ಫೋಟೋ ತೆಗೆದು ವಾಟ್ಸಪ್ನಲ್ಲಿ ಹಾಕಿದರು. ಇದನ್ನು ಕಂಡ ಆತನ ನೆರೆಹೊರೆಯವರು ಹಾಗೂ ಸಹೋದರರು ಗುರುತಿಸಿ ಮನೆಗೆ ಕರೆತರುವ ವ್ಯವಸ್ಥೆ ಮಾಡಿದ್ದಾರೆ.
ಇದೀಗ 26 ವರ್ಷದ ಬಳಿಕ ಶಿವಪ್ಪ ಮರಳಿ ಬಂದಿರುವುದು ಮನೆ ಮಂದಿಗೆ ಖುಷಿ ತಂದಿದೆಯಾದರೂ, ಕೊನೇ ಬಾರಿ ತಂದೆ-ತಾಯಿಯನ್ನು ನೋಡುವ ಭಾಗ್ಯವನ್ನು ಕಳೆದುಕೊಂಡಿರುವುದು ಎಲ್ಲರಿಗೂ ಬೇಸರ ತಂದಿದೆ.
ಶಿವಪ್ಪ ತನ್ನ ಸಹೋದರ ಸಹೋದರಿಯರೊಂದಿಗೆ ಮುಂದಿನ ಜೀವನವನ್ನು ತನ್ನ ಹುಟ್ಟೂರಿನಲ್ಲಿ ಕಳೆಯಲು ನಿರ್ಧರಿಸಿದ್ದಾನೆ.

