ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.
ಉಳ್ಳಾಲ ದರ್ಗಾ ರಸ್ತೆ ನಿವಾಸಿ ಅಬ್ದುಲ್ ರೆಹಮಾನ್ ಅರ್ಪಾನ್ ಅಲಿಯಾಸ್ ಜಲ್ದಿ ಅರ್ಪಾನ್ (24), ಬೋಳೂರು, ಬೊಕ್ಕಪಟ್ಣ ನಿವಾಸಿ ಅಬ್ದುಲ್ ಜಲೀಲ್(42) ಹಾಗೂ ಬೋಳಿಯಾರ್ ಗ್ರಾಮ ನಿವಾಸಿ ಮೊಹಮ್ಮದ್ ಮನ್ಸೂರ್ (29) ಬಂಧಿತ ಆರೋಪಿಗಳು.
ಆರೋಪಿಗಳು ಎಂಡಿಎಂಎಯನ್ನು ಕೇರಳದ ಗಡಿಭಾಗದಿಂದ ಕಾರಿನಲ್ಲಿ ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಲು ಬರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಬಿ.ರವರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ – ದೇವಿಪುರ ರಸ್ತೆಯ ತಚ್ಚಾಣಿ ಬಳಿ ಕಾರನ್ನು ತಪಾಸಣೆ ಮಾಡಿದ ವೇಳೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪತ್ತೆಯಾಗಿದೆ.
ಬಂಧಿತರಿಂದ 32 ಗ್ರಾಂ ತೂಕದ 1,62,000 ರೂ. ಮೌಲ್ಯದ ಎಂಡಿಎಂಎ, 4 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪನ, 22,000 ರೂಪಾಯಿ ನಗದು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಇಗ್ನೀಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 7,17,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಮಾದಕ ವಸ್ತುಗಳನ್ನು ಕೇರಳದಿಂದ ತಂದು ದೇರಳಕಟ್ಟೆ, ಮುಡಿಪು, ನೆತ್ತಿಲಪದವು, ತಲಪಾಡಿ, ಉಳ್ಳಾಲ ಹಾಗೂ ಮಂಗಳೂರು ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
