ಉಡುಪಿ: ಉಡುಪಿ ನಗರದ ವಾದಿರಾಜ ರಸ್ತೆಯ ಮನೆಯ ಕೊಠಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹವು ಸುಟ್ಟ ಸ್ಥಿತಿಯಲ್ಲಿ ಇಂದು ಸಂಜೆ ಪತ್ತೆಯಾಗಿದೆ.
ಮೃತರನ್ನು ವಾದಿರಾಜ ರಸ್ತೆಯ ನಿವಾಸಿ ರಾಜು ಗೋಪಾಲ್ ಸಾಮಗ (42) ಎಂದು ಗುರುತಿಸಲಾಗಿದೆ. ಕರ್ನಾಟಕ ಬ್ಯಾಂಕಿನ ಲೀಗಲ್ ಅಧಿಕಾರಿಯಾಗಿದ್ದ ಇವರು, ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣ ಸಾಮಗ ಅವರ ಮಗ.
ಪತ್ನಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ಸಂಭವಿಸಿದೆ. ನೆರೆಮನೆಯವರು ಮನೆಯಲ್ಲಿ ಬರುತ್ತಿದ್ದ ಹೊಗೆ ಯನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮನೆಯ ಬಾಗಿಲು ಒಡೆದು ಪರಿಶೀಲಿಸಿದಾಗ ರಾಜ ಗೋಪಾಲ್ ಬೆಂಕಿಯಿಂದ ಸುಟ್ಟು ಮೃತಪಟ್ಟಿರುವುದು ಕಂಡುಬಂದಿದೆ.
ಇದು ಆತ್ಮಹತ್ಯೆಯೋ ಅಥವಾ ಮೊಬೈಲ್ ಸ್ಪೋಟ ನಡೆದಿರುವುದೊ ಎಂದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ. ಉಡುಪಿ ನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
