ಮಹಾನಗರ: ಇಲ್ಲಿನ ಕುಡುಂಬೂರು ಹೊಳೆಗೆ ತ್ಯಾಜ್ಯ ಮಿಶ್ರಿತ ನೀರು ಬಿಡಲಾಗುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸುವ ಸಮೀಕ್ಷೆ ಬಗ್ಗೆ ನಂಬಿಕೆ ಇಲ್ಲ, ಹಾಗಾಗಿ ಇದರ ಬಗ್ಗೆ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್ ಆಗುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ, ಸರಕಾರದ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್ ಸೂಚಿಸಿದರು.
ಕೂಳೂರು ಬಳಿಯ ಒಡಿಸಿ ರಸ್ತೆಯ ಇಕ್ಕೆಲಗಳಲ್ಲಿನ ಮಾಲಿನ್ಯ, ಜೋಕಟ್ಟೆ ಪರಿಸರದಲ್ಲಿನ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು.
ಫಲ್ಗುಣಿ ನದಿಗೆ ಸೇರುವ ಕುಡುಂಬೂರು ಹೊಳೆ ಬೈಕಂಪಾಡಿಯಿಂದ ಹರಿದು ಬರುತ್ತದೆ. ಇದಕ್ಕೆ ಜೋಕಟ್ಟೆಯಲ್ಲಿನ ಕೆಲವು ಕೈಗಾರಿಕೆಗಳಿಂದ ಮಲಿನ ನೀರು ಸೇರುತ್ತಿದೆ. ಇಡೀ ಪ್ರದೇಶದಲ್ಲಿ ಕೆಲವೊಮ್ಮೆ ದುರ್ವಾಸನೆ ಹರಡಿರುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರೂ ಹಾಜರಿರದ ಬಗ್ಗೆ ಫಾರೂಕ್ ಹಾಗೂ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮಂಡಳಿಯ ಅಧಿಕಾರಿ ಕುಡುಂಬೂರು, ಹೊಳೆಯ ಮಾಲಿನ್ಯದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಈಗಾಗಲೇ ಈ ಬಗ್ಗೆ ಹಲವು ಸಭೆಗಳಲ್ಲಿ ಚರ್ಚಿಸಲಾಗಿದೆ. ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಇದರ ಜತೆಯಲ್ಲೇ ಲ್ಯಾಬ್‌ವೊಂದನ್ನೂ ಸ್ಥಾಪಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗಿದ್ದರೆ ಇಲ್ಲಿನ ವಿವಿಧ ಮಾಲಿನ್ಯದ ಮಟ್ಟವನ್ನು ತಿಳಿಯಲು ಸಹಾಯಕವಾಗಬಲ್ಲದು ಎಂದರು.
ಕೈಗಾರಿಕೆ ಕಾರಿಡಾರ್ ರಸ್ತೆಯ ಬದಿಯಲ್ಲೇ ಕೆಲವು ಕೈಗಾರಿಕೆಗಳ ಪೈಪ್‌ಲೈನ್ ಹಾದು ಹೋಗಿರುವುದರಿಂದ ಸುರಕ್ಷತೆ ದೃಷ್ಟಿಯಲ್ಲಿ ಅಪಾಯವುಂಟಾಗುವ ಸಾಧ್ಯತೆ ಇದೆ. ವಾಹನಗಳಿಗೆ ಈ ರಸ್ತೆಯಲ್ಲಿ ಸಂಚರಿಸುವುದಕ್ಕೂ ಸಾಕಷ್ಟು ಸ್ಥಳಾವಕಾಶ ಸಾಕಾಗುತ್ತಿಲ್ಲ ಎಂದು ಸಮಿತಿ ಸದಸ್ಯರ ಬಳಿ ಸ್ಥಳೀಯರು ದೂರು ನೀಡಿದರು.
ಒಂದುವೇಳೆ ಪೈಪ್‌ಲೈನ್ ಸ್ಫೋಟಿಸಿದರೆ ಅದರಿಂದ ಸ್ಥಳೀಯರಿಗೆ ಅಪಾಯವಷ್ಟೇ ಅಲ್ಲ, ಫಲ್ಗುಣಿ ನದಿಯಲ್ಲೂ ಮಾಲಿನ್ಯ ಉಂಟಾಗಬಹುದು. ರಸ್ತೆಗೆ ಸಮೀಪದಲ್ಲೇ ಇಷ್ಟು ಪೈಪ್‌ಲೈನ್ ಹೋಗಿರುವುದು ಯಾಕಾಗಿ ಎಂದು ಫಾರೂಕ್ ಈ ವೇಳೆ ಆತಂಕ ವ್ಯಕ್ತಪಡಿಸಿದರು.

