ಮಂಗಳೂರು ಎಲ್ಲಾ ಮಸೀದಿಗಳಲ್ಲೂ ಶಿವಲಿಂಗ ಹುಡುಕುವುದು ಸರಿಯಲ್ಲ. ಮುಸ್ಲಿಮರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಅವರು ಹೊರಗಿನವರಲ್ಲ ಎಂಬ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ಸ್ವಾಗತಾರ್ಹ ಎಂದು ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ.
ಈ ಹಿಂದೆ ಕೆ.ಸುದರ್ಶನ್ ಕೂಡ ಮುಸ್ಲಿಮರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.
ಪರಸ್ಪರ ವಾಕ್ಸಮರ,ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾ ನಾಗರಿಕರ ನೆಮ್ಮದಿ ಕೆಡಿಸುವ ಪ್ರವೃತ್ತಿ ಗಳು ದೈನಂದಿನೇ ವಿವಿಧ ರೂಪಗಳನ್ನು ಪಡೆಯುತ್ತಿರುವ ವರ್ತಮಾನ ಸನ್ನಿವೇಶದಲ್ಲಿ ಮೋಹನ್ ಭಾಗವತ್ ರ ಪ್ರಸ್ತುತ ಹೇಳಿಕೆ ಮಹತ್ವದ್ದಾಗಿದೆ.
ಪ್ರತಿಯೊಂದು ಮಾತುಗಳೂ ಪರಸ್ಪರರ ವಿರುದ್ಧ ವಿರಬೇಕೆಂಬ ಸಂಕುಚಿತ ಮನೋಭಾವ ತ್ಯಜಿಸಿ ಎಲ್ಲರೂ ಏಕೋದರ ಸಹೋದರ ಸಹೋದರಿಯರ ಸ್ಥಾನದಲ್ಲಿರುವವರು ಎಂದು ಪ್ರತಿಯೊಬ್ಬರು ಕೂಡ ಚಿಂತಿಸಿದರೆ ಕೋಮುವಾದ,ಅಸಹಿಷ್ಣುತೆ ತನ್ನಿಂತಾನೇ ದೂರವಾಗಬಹುದು.
ಯಾವುದಾದರೊಂದು ಸಂಘಟನೆಯವರು ಸಮಾಜಕ್ಕೆ ಪೂರಕ ಹೇಳಿಕೆ ನೀಡಿದಾಗ ಅದನ್ನು ಮುಕ್ತ ಕಂಠದಿಂದ ಪ್ರಶಂಸಿಸುವವರನ್ನು ಅಪಹಾಸ್ಯ, ನಿಂದನೆ ಮಾಡಿ ಅವರ ಸಮಾಜ ಕಟ್ಟುವ ಕನಸನ್ನು ಭಗ್ನ ಗೊಳಿಸುವುದು ಸರಿಯಲ್ಲ.
ಎಲ್ಲಾ ಕಾಲದಲ್ಲೂ ಧರ್ಮ, ಜಾತಿ, ಪಕ್ಷ, ಸಂಘಟನೆ ಎಂದು ಕಚ್ಚಾಡುವುದು ಮನುಷ್ಯರೆನಿಸಿದವರಿಗೆ ಭೂಷಣವಲ್ಲ.
ಎಷ್ಟು ವಿರೋಧವಿದ್ದರೂ ಒಂದು ದಿನ ಈ ಭೂಮಿ ಬಿಟ್ಟು ಪರಲೋಕ ಜೀವನಕ್ಕೆ ಯಾತ್ರೆಗೈಯ್ಯಬೇಕು.
ಆದ್ದರಿಂದ ಸಮಾಜದ ಪ್ರಮುಖ ಸ್ಥಾನದಲ್ಲಿರುವವರು ಸಮಾಜಕ್ಕೆ ಪೂರಕವೆನಿಸುವ ಹೇಳಿಕೆ ನೀಡುವಾಗ ಸಮಾಜ ತಕ್ಷಣ ಅದನ್ನು ಬೆಂಬಲಿಸಿ ಸಮಾಜದಲ್ಲಿ ಸಾಮರಸ್ಯ ನಿರ್ಮಾಣದ ಹಾದಿಗಳನ್ನು ಪರಸ್ಪರ ಸಮಾಲೋಚನೆ ಮೂಲಕ ಕಂಡು ಕೊಳ್ಳಬೇಕು.
ತರ್ಕ,ವಾದ,ವಿವಾದಗಳ ಹಿಂದೆ ಬಿದ್ದು ಅಮೂಲ್ಯ ಸಮಯ ವ್ಯರ್ಥ ಮಾಡಿದರೆ ಮುಂದಿನ ತಲೆಮಾರುಗಳಾದ ಇಂದಿನ ಪೀಳಿಗೆ ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ.
ಪ್ರತಿಯೊಬ್ಬ ನಾಗರಿಕ ಕೂಡ ಮನಶ್ಶಾಂತಿ,ಸಾಮರಸ್ಯ ದಿಂದ ಬದುಕುವ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದ್ದು ಎಲ್ಲಾ ಕಹಿ ಘಟನೆಗಳನ್ನು ಮರೆತು ಹಿಂದೂ ಮುಸ್ಲಿಮರೆಲ್ಲರೂ ಪರಸ್ಪರ ಕೈ ಜೋಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕೆಂದು ಅವರು ತಿಳಿಸಿದ್ದಾರೆ.

