ಮಂಗಳೂರು : ನಗರದ ಕಂಕನಾಡಿ ನಾಗುರಿ ಸಮೀಪ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆಟೋದಲ್ಲಿ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿದ್ದು, ಇದೊಂದು ಉಗ್ರ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಸ್ಫೋಟ ಆಕಸ್ಮಿಕವಲ್ಲ, ಆದರೆ ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಇದರ ಬಗ್ಗೆ ಆಳವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಶನಿವಾರ ಸಂಜೆ ನಾಗುರಿ ಸಮೀಪ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ವಸ್ತುವೊಂದು ಸ್ಪೋಟಗೊಂಡು ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಸದ್ಯ ಸ್ಪೋಟಕ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು, ಬೋಲ್ಟ್ ಪತ್ತೆ ಹಚ್ಚಿದ್ದಾರೆ.
ಸರ್ಕ್ಯೂಟ್ ರೀತಿಯ ವೈರಿಂಗ್ ಮಾಡಿರುವ ವಸ್ತುಗಳು ಪತ್ತೆಯಾಗಿದ್ದು, ಲಘು ತೀವ್ರ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದ್ದು, ವಸ್ತುಗಳನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ ತಂಡಕ್ಕೆ ಕಳುಹಿಸಲಾಗಿದೆ.
