ನವದೆಹಲಿ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇತ್ತೀಚಿನ ಶ್ರದ್ಧಾ ವಾಕರ್ ಹತ್ಯೆ ಆರೋಪಿ ಅಫ್ತಾಬ್ ಪೂನಾವಾಲಾ ಇದ್ದ ಪೊಲೀಸ್ ವಾಹನದ ಮೇಲೆ ಸೋಮವಾರ ಸಂಜೆ ಗುಂಪೊಂದು ದಾಳಿಯೊಂದು ನಡೆಸಿದೆ.
ವಿಧಿವಿಜ್ಞಾನ ಪ್ರಯೋಗಾಲಯದಿಂದ ಅಫ್ತಾಬ್ ನನ್ನು ಸೋಮವಾರ ಸಂಜೆ ವಾಪಾಸ್ ಕರೆದೊಯ್ಯುವ ಸಂದರ್ಭದಲ್ಲಿ ಕತ್ತಿ ಹಿಡಿದಿದ್ದ ಉದ್ರಿಕ್ತರ ಗುಂಪೊಂದು ಬಂದು ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದೆ. ಆ ಸಮಯದಲ್ಲಿ ಕೂಡಲೇ ಆರೋಪಿ ಅಫ್ತಾಬ್‌ನ ರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿ ಅಫ್ತಾಬ್ ಅನ್ನು ಪಶ್ಚಿಮ ದಿಲ್ಲಿಯಲ್ಲಿರುವ ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಎರಡನೇ ಬಾರಿ ಪಾಲಿಗ್ರಾಫ್ ಪರೀಕ್ಷೆಯನ್ನು ಸೋಮವಾರ ನಡೆಸಲು ಕರೆದುಕೊಂಡು ಬರಲಾಗಿತ್ತು. ಪರೀಕ್ಷೆಯ ಬಳಿಕ ಅಫ್ತಾಬ್ ಅನ್ನು ಜೈಲಿಗೆ ಕರೆದೊಯ್ಯುವ ವೇಳೆ ಎಫ್‌ಎಸ್‌ಎಲ್ ಕಟ್ಟಡದ ಹೊರಗಡೆ ಪೊಲೀಸರ ವಾಹನ ಬರುತ್ತಿದ್ದಂತೆ ಕತ್ತಿಯಿಡಿದ ಜನರ ಗುಂಪು ದಾಳಿ ನಡೆಸಿದೆ. ಕತ್ತಿ ಹಿಡಿದಿದ್ದ ಹದಿನೈದು ಮಂದಿಯ ಗುಂಪು ಪೊಲೀಸ್ ವಾಹನದ ಮೇಲೆ ಹತ್ತಿ ಅಫ್ತಾಬ್ ನನ್ನು ಹುಡುಕುತ್ತಿದ್ದಾಗಿ ವರದಿಯಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನೆಯಲ್ಲಿ ಕೆಲವು ದಾಳಿಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅಫ್ತಾಬ್ ಸುರಕ್ಷಿತವಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.