ಸುಳ್ಯ :ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಮನೆಯಲ್ಲಿ ಇದ್ದ ಸಂದರ್ಭ ಅವರ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿಯಾದ ಆರೋಪಿ ಸಲೀಂ ಪಿ.ಎ. (34) ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ನ. 28ರಂದು ಬೆಳಿಗ್ಗೆ 10.30ಕ್ಕೆ ಓರ್ವ ಅಪರಿಚಿತ ವ್ಯಕ್ತಿ ಜಾಲ್ಸೂರು ಗ್ರಾಮದ ಶ್ರೀಮತಿ ಕಮಲ (64) ಎಂಬವರ ಮನೆಗೆ ಹೋಗಿ ನೀರು ಕೇಳುವ ನೆಪದಲ್ಲಿ ಮನೆಯ ಒಳಗೆ ಪ್ರವೇಶಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವುದಾಗಿ ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ವಿಶೇಷ ತಂಡ ರಚಿಸಿದ ಪೋಲೀಸರು ಕೇರಳದ ದೇಲಂಪಾಡಿ ಗ್ರಾಮದ ಕೊಟ್ಯಾಡಿ ಬಳಿ ಗುರುವಾರ ಆರೋಪಿ ಸಲೀಂನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿಯು ವೃದ್ದ ಮಹಿಳೆಯ ಕುತ್ತಿಗೆಯಿಂದ ಕಿತ್ತುಕೊಂಡು ಹೋಗಿದ್ದ ರೂ. 45,000 ಮೌಲ್ಯದ ಚಿನ್ನದ ಸರದ ತುಂಡು ಹಾಗೂ ಅತ ಕೃತ್ಯಕ್ಕೆ ಬಳಸಿದ ಬೈಕ್ ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದುಬಂದಿದೆ.