ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಎಂದು ಬಿರುದು ಪಡೆದುಕೊಂಡಿದ್ದ ಶ್ರೀನಿವಾಸ್ ಗೌಡ ಸುಳ್ಳು ದಾಖಲೆ ಸೃಷ್ಟಿಸಿ, ಕಂಬಳ ಉದ್ದಾರ ಮಾಡಿದ್ದೇವೆ ಎಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಅಕ್ರಮ ಎಸಗಿದ್ದಾರೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಮಾಡಲು ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ವಿವರಣೆ ನೀಡಿದ ಅವರು ಮೂಡುಬಿದಿರೆಯ ನಿವಾಸಿ ಲೊಕೇಶ್ ಶೆಟ್ಟಿ ಎಂಬವರು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ವಿರುದ್ಧ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ. ಇದರಲ್ಲಿ ಮೂವರು ವ್ಯಕ್ತಿಗಳನ್ನು ಉಲ್ಲೇಖಿಸಿ ಕಂಬಳದ ಹೆಸರಿನಲ್ಲಿ , ಅಕ್ರಮ , ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ದೂರು ನೀಡಿದ್ದಾರೆ. ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಖ್ಯಾತರಾಗಿರುವ ಕಂಬಳ ಓಟಗಾರ ಶ್ರೀನಿವಾಸ ಗೌಡ, ರತ್ನಾಕರ, ಕೆ. ಗುಣಪಾಲ ಕಡಂಬ ವಿರುಧ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಂಬಳ ಸಮಿತಿ ಹೆಸರಿನಲ್ಲಿ ಮೂವರು ವಂಚನೆ ಎಸಗಿದ್ದಾರೆ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಲಾಗಿದೆ. ಸಮಿತಿ ಹೆಸರಲ್ಲಿ ಹಣ ಪಡೆದು ಲಕ್ಷಾಂತರ ರೂ. ಹಣಕ್ಕೆ ಲೆಕ್ಕಪತ್ರ ಕೊಟ್ಟಿಲ್ಲ ಎಂದು ಲೋಕೇಶ್ ಶೆಟ್ಟಿ ಕಂಬಳ ಸಮಿತಿ ವಿರುದ್ಧ ದೂರು ನೀಡಿದ್ದಾರೆ. ಇದೀಗ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ. ಸದ್ಯ ಮೂವರ ವಿರುದ್ದ ಈ ದೂರನ್ನು ಕೊಡಲಾಗಿದೆ. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸೂಚಿಸಿದ್ದೇನೆ. ಮೂಡಬಿದ್ರೆ ಇನ್ಸ್ಪೆಕ್ಟರ್ ಈ ಬಗ್ಗೆ ವಿಚಾರಣೆ ನಡೆಸಿ ಸತ್ಯಾಸತ್ಯತೆ ತನಿಖೆ ಮಾಡಿ ವರದಿ ನೀಡಲಿದ್ದಾರೆ.