ಮುಂಬಯಿ: ಉದ್ಯಮಿ ಮುಖೇಶ್ ಅಂಬಾನಿ ಬಂಗಲೆ ಮುಂದೆ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಪ್ರಕರಣ ಸಂಬಂಧ ಅಮಾನತುಗೊಂಡಿರುವ ಮುಂಬಯಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಸ್ಥಳಕ್ಕೆ ಕರೆ ತಂದಿರುವ ಎನ್ ಐ ಎ ತನಿಖಾ ತಂಡ ಅಪರಾಧ ಪ್ರಕರಣದ ಮರುಸೃಷ್ಟಿ ಮಾಡಿದೆ.
ತನಿಖೆಯ ಅಂಗವಾಗಿ ಅಪರಾಧ ಪ್ರಕರಣದ ಮರುಸೃಷ್ಟಿ ಮಾಡಲಾಗಿದೆ ಎಂದು ಶನಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ತಡ ರಾತ್ರಿ ಮರುಸೃಷ್ಟಿ ಮಾಡಲಾಗಿದ್ದು, ಸಚಿನ್ ವಾಜೆ ಅವರನ್ನು ಕೆಲಕಾಲ ಅದೇ ಪ್ರದೇಶದಲ್ಲಿ ವಾಕಿಂಗ್ ಮಾಡುವಂತೆ ಸೂಚಿಸಲಾಯಿತು.
ಘಟನೆಯ ದಿನದಂದು ಕಾರ್ಮೈಕಲ್ ರಸ್ತೆಯಲ್ಲಿ ದಾಖಲಾದ ಸಿಸಿಟಿವಿ ದೃಶ್ಯಾವಳಿಗಳಲ್ಲಿರುವ ವಿಡಿಯೋದಲ್ಲಿ ಕುರ್ತಾ ಧರಿಸಿದ ವ್ಯಕ್ತಿ ವಾಜೆ ಎಂದು ಎನ್ಐಎ ಶಂಕಿಸಿದೆ.ಆದರೆ ಅದು ಇನ್ನೂ ದೃಢಪಡಬೇಕಿದೆ.
ಶುಕ್ರವಾರ ರಾತ್ರಿ ವಾಜೆ ಮತ್ತು ತನಿಖಾಧಿಕಾರಿಗಳು 30 ನಿಮಿಷಗಳಿಗೂ ಹೆಚ್ಚು ಕಾಲ ಘಟನಾ ಸ್ಥಳದಲ್ಲಿದ್ದರು. ಅಪರಾಧದ ಸನ್ನಿವೇಶವನ್ನು ಮರುಸೃಷ್ಟಿ ಮಾಡಿದ ಪ್ರಕ್ರಿಯೆಯನ್ನು ವಿಡಿಯೊ ರೆಕಾರ್ಡ್ ಮಾಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ. ಫೆ. 25 ರಂದು ಮುಕೇಶ್ ಅಂಬಾನಿಯ ಬಹುಮಹಡಿ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳು ತುಂಬಿದ ಎಸ್ಯುವಿ ವಾಹನ ಮತ್ತು ಅದರೊಳಗೆ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು.