ನವದೆಹಲಿ : ಕೇಂದ್ರ ಸರ್ಕಾರವು ಇಂದು ಭಾರತದ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಅಗ್ನಿಪಥ್ ಯೋಜನೆ ಜಾರಿಯಾಗಿದೆ. ‘ಅಗ್ನಿವೀರ’ರಿಗೆ ಉತ್ತಮ ವೇತನ ಪ್ಯಾಕೇಜ್ ನೀಡಲಾಗುತ್ತದೆ. ಜೊತೆಗೆ ನಾಲ್ಕು ವರ್ಷದ ಸೇವೆಯ ನಂತರ ಉತ್ತಮ ನಿರ್ಗಮನ ನಿವೃತ್ತಿ ಪ್ಯಾಕೇಜ್ ಕೂಡ ಕೊಡಲಾಗುವುದು ಎಂದು ಹೇಳಿದೆ.
ಅಗ್ನಿಪತ್ ಎನ್ನುವುದು ಸೈನಿಕರು, ವಾಯುಪಡೆಯ ಸಿಬ್ಬಂದಿ ಮತ್ತು ನೌಕಾಪಡೆಗೆ ಪ್ರವೇಶ ನೀಡುವ ಅರ್ಹತೆ ಆಧಾರದ ಪ್ಯಾನ್ ಇಂಡಿಯಾ ನೇಮಕಾತಿ ಯೋಜನೆ. ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರ್ಗಳಲ್ಲಿ ಸೇವೆ ಸಲ್ಲಿಸಲು ಯುವಜನರಿಗೆ ಇದು ಅವಕಾಶ ಕಲ್ಪಿಸಲಿದೆ. ಅಗ್ನಿಪಥ್ ಯೋಜನೆ ಅಡಿ ನೇಮಕಗೊಂಡ ಯೋಧರನ್ನು ‘ಅಗ್ನಿವೀರ’ ಎಂದು ಕರೆಯಲಾಗುತ್ತದೆ. ಅಗ್ನಿವೀರರನ್ನು ತರಬೇತಿ ಅವಧಿ ಸೇರಿದಂತೆ ನಾಲ್ಕು ವರ್ಷಗಳ ಪಟ್ಟಿಗೆ ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ. ನಾಲ್ಕು ವರ್ಷದ ಬಳಿಕ ಶೇ 25ರಷ್ಟು ಅಗ್ನಿವೀರರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ ಮತ್ತು ಅರ್ಹತೆ, ಇಚ್ಛೆ ಹಾಗೂ ವೈದ್ಯಕೀಯ ಸದೃಢತೆ ಆಧಾರದಲ್ಲಿ ಸಾಮಾನ್ಯ ಕೇಡರ್ಗಳಲ್ಲಿ ಮರು ಸೇರ್ಪಡೆ ಮಾಡಲಾಗುತ್ತದೆ.
ಬಳಿಕ ಅವರು ಮತ್ತೆ 15 ವರ್ಷ ಪೂರ್ಣಾವಧಿಗೆ ಸೇವೆ ಸಲ್ಲಿಸುತ್ತಾರೆ. ಮೊದಲ ನಾಲ್ಕು ವರ್ಷ, ಅವರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಾರೆ. ಈ ಅವಧಿಯನ್ನು ಅಂತಿಮ ಪಿಂಚಣಿ ಪ್ರಯೋಜನಗಳನ್ನು ನಿಗದಿಪಡಿಸಲು ಪರಿಗಣಿಸುವ ಸಾಧ್ಯತೆ ಇರುವುದಿಲ್ಲ.ಉಳಿದ ಶೇ 75ರಷ್ಟು ಅಗ್ನಿವೀರರನ್ನು ನಿವೃತ್ತಿಗೊಳಿಸಲಾಗುತ್ತದೆ. ಅವರಿಗೆ 11- 12 ಲಕ್ಷ ರೂಪಾಯಿ ‘ಸೇವಾ ನಿಧಿ’ ಪ್ಯಾಕೇಜ್ ಜತೆ ಬೀಳ್ಕೊಡುಗೆ ನೀಡಲಾಗುತ್ತದೆ. ಇದು ಭಾಗಶಃ ಅವರ ಮಾಸಿಕ ಕೊಡುಗೆಗಳನ್ನು ಒಳಗೊಂಡಿರುತ್ತದೆ. ಇದರ ಜತೆಗೆ ಕೌಶಲ ಪ್ರಮಾಣಪತ್ರ ಮತ್ತು ಅವರ ಎರಡನೇ ವೃತ್ತಿ ಜೀವನಕ್ಕೆ ಸಹಾಯ ಮಾಡಲು ಬ್ಯಾಂಕ್ ಸಾಲಗಳನ್ನು ಕೊಡಲಾಗುತ್ತದೆ.
ಯೋಜನೆಯ ಪ್ರಮುಖ ವಿವರಗಳು ಇಲ್ಲಿವೆ:
ಅಗ್ನಿಪಥ್ ಯೋಜನೆ ಎಂದರೇನು?
ಇದು ಸಶಸ್ತ್ರ ಪಡೆಗಳಿಗೆ ಪ್ಯಾನ್-ಇಂಡಿಯಾ ಅಲ್ಪಾವಧಿಯ ಸೇವಾ ಯುವಕರ ನೇಮಕಾತಿ ಯೋಜನೆಯಾಗಿದೆ. ‘ಅಗ್ನಿವೀರ’ ಎಂದು ಕರೆಯಲ್ಪಡುವ ನೇಮಕಾತಿಗಳು ವಿವಿಧ ಭೂ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತವೆ.
ಅರ್ಹತೆ
ಯೋಜನೆಗೆ ಅರ್ಹರಾಗಲು ವಯಸ್ಸಿನ ವ್ಯಾಪ್ತಿಯು 17.5-21 ವರ್ಷಗಳಾಗಿವೆ. ಸದ್ಯ ಪುರುಷರಿಗೆ ಅವಕಾಶ ನೀಡಲಾಗಿದ್ದು, ಭವಿಷ್ಯದಲ್ಲಿ, ಮಹಿಳೆಯರು ಕ್ರಮೇಣವಾಗಿ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗಲಿದ್ದಾರೆ.
ಸೇವಾ ಅವಧಿ
ಅಗ್ನಿಪಥ ಯೋಜನೆಯಡಿ, ಅಗ್ನಿವೀರ್ಗಳಿಗೆ ನಾಲ್ಕು ವರ್ಷಗಳ ಕಾಲ ಉದ್ಯೋಗ ನೀಡಲಾಗುವುದು ಮತ್ತು ಅವರಿಗೆ ಕಠಿಣ ಮಿಲಿಟರಿ ತರಬೇತಿಯನ್ನು ನೀಡಲಾಗುವುದು.
ವೇತನದ ಮಾಹಿತಿ
ಈ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ ತಿಂಗಳಿಗೆ30,000 ರೂ ಸಂಬಳ ನೀಡಲಾಗುತ್ತದೆ. ಆರಂಭಿಕ ವಾರ್ಷಿಕ ಪ್ಯಾಕೇಜ್ ರೂ 4.76 ಲಕ್ಷ ಆಗಿದ್ದು, ಸೇವೆಯ ಅಂತ್ಯದ ವೇಳೆಗೆ ಇದನ್ನು 6.92 ಲಕ್ಷಕ್ಕೆ ಹೆಚ್ಚಿಸಬಹುದು. ಭತ್ಯೆಗಳು ಮತ್ತು ಕೊಡುಗೆ ರಹಿತ ವಿಮಾ ರಕ್ಷಣೆಯೂ ಇರುತ್ತದೆ.
ಶಾಶ್ವತ ಸೇವೆಯನ್ನು ಆರಿಸಿಕೊಳ್ಳಬಹುದೇ?
ನಾಲ್ಕು ವರ್ಷಗಳ ನಂತರ, ಕಾಯಂ ಕೇಡರ್ಗೆ ದಾಖಲಾತಿಗಾಗಿ ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗುವುದು. ಸೇವೆಯ ಸಮಯದಲ್ಲಿ ಅರ್ಹತೆ ಮತ್ತು ಕಾರ್ಯಕ್ಷಮತೆಯನ್ನು ಆಧರಿಸಿ ಈ ಅಪ್ಲಿಕೇಶನ್ಗಳನ್ನು ಪರಿಗಣಿಸಲಾಗುತ್ತದೆ. 25% ರಷ್ಟು ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

