Thursday, March 28, 2024
spot_img
More

    Latest Posts

    ಅಗ್ನಾತಾನ್ – 2022′ ಉದ್ಘಾಟಿಸಿದ ಭಾಸ್ಕರ ರೈ ಕುಕ್ಕುವಳ್ಳಿ

    ಮಂಗಳೂರು: ‘ ಕ್ರೈಸ್ತ ಮಿಷನರಿಗಳು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಶಿಕ್ಷಣ ಸಂಸ್ಥೆಗಳು ನಾಡು ಹೊರನಾಡಿನ ವಿದ್ಯಾರ್ಥಿಗಳನ್ನು ಬಹುವಾಗಿ ಸೆಳೆಯುತ್ತಿವೆ. ಇದಕ್ಕೆ ಅವು ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಮಾತ್ರವಲ್ಲದೆ ಈ ನೆಲದ ಸಂಸ್ಕೃತಿಗೆ ನೀಡುತ್ತಿರುವ ಗೌರವವೂ ಕಾರಣವಾಗಿದೆ’ ಎಂದು ಯಕ್ಷಗಾನ ಹಾಗೂ ಜಾನಪದ ವಿದ್ವಾಂಸ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
    ಸೆಪ್ಟಂಬರ್ 7ರಂದು ಮಂಗಳೂರಿನ ಸಂತ ಆಗ್ನೇಸ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಆಗ್ನಥಾನ್ – 2022’ ಅಂತರ್ ಶಾಲೆ ಮತ್ತು ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಜಾನಪದ ಮೆರವಣಿಗೆ:
    ಚಂಡೆ ವಾದ್ಯಗಳ ಸಹಿತ ತೆರೆದ ವಾಹನದಲ್ಲಿ ಸಾಗಿದ ವರ್ಣ ರಂಜಿತ ಜಾನಪದ ಮೆರವಣಿಗೆ ಹಾಗೂ ತುಳು ಜನಪದ ಶೈಲಿಯ ಹಾಡು ನೃತ್ಯದೊಂದಿಗೆ ಉದ್ಘಾಟಕರನ್ನು ವೇದಿಕೆಗೆ ಕರೆ ತಂದರು. ಸಾಂಪ್ರದಾಯಿಕ ರೀತಿಯಿಂದ ಭತ್ತದ ಕಳಸೆಯಲ್ಲಿ ತೆಂಗಿನ ಸಿರಿ ಅರಳಿಸಿ ಇಡೀ ದಿನದ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.
    ‘ ತುಳುನಾಡಿನ ಸಾಂಸ್ಕೃತಿಕ ಮತ್ತು ಭೌಗೋಳಿಕ ಸಿರಿವಂತಿಕೆ ದೇಶ ವಿದೇಶಗಳ ಜನರಿಗೆ ಆಸಕ್ತಿಯ ವಿಷಯವಾಗಿದೆ. ಇಲ್ಲಿನ ಜೀವನ ಶೈಲಿ, ಆಚಾರ ವಿಚಾರಗಳು, ಕಲೆ – ಸಂಸ್ಕೃತಿ ಮತ್ತು ರಂಜನೀಯ ತಾಣಗಳು ಎಲ್ಲ ಬಗೆಯವರನ್ನೂ ಆಕರ್ಷಿಸುವ ವಿಶಾಲ ಗುಣ ಹೊಂದಿದೆ. ಇದನ್ನು ಸಹಜ ಸ್ವರೂಪದಲ್ಲಿ ಯುವ ಜನರಿಗೆ ತಿಳಿಸುವ ಕಾರ್ಯ ವಿದ್ಯಾಸಂಸ್ಥೆಗಳ ಮೂಲಕ ಸಾಧ್ಯವಾದರೆ ಮುಂದಿನ ಜನಾಂಗ ಅದರ ನಿರಂತರತೆಯನ್ನು ಕಾಯ್ದುಕೊಳ್ಳಲು ಅನುಕೂಲವಾಗುವುದು’ ಎಂದು ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.

    ಸೌಹಾರ್ದತೆಯ ಸಂಕೇತ:
    ಮುಖ್ಯ ಅತಿಥಿಯಾಗಿ ಮಾತನಾಡಿದ ಡೈಜಿ ವರ್ಲ್ಡ್ ಸಂಪಾದಕ ವಾಲ್ಟರ್ ನಂದಳಿಕೆ ‘ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂತ ಆಗ್ನೆಸ್ ಸಂಸ್ಥೆ ನೀಡುತ್ತಿರುವ ಪ್ರೋತ್ಸಾಹ ವಿಶೇಷವಾದುದು. ಇದು ಸೌಹಾರ್ದತೆಯ ಸಂಕೇತ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯೊಂದಿಗೆ ನಾಡು ನುಡಿಯ ಸೇವೆಯನ್ನೂ ಮಾಡುವ ಗುರಿ ಹೊಂದಿರಬೇಕು’ ಎಂದರು. ಉದ್ಘಾಟಕರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
    ಆಗ್ನೆಸ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ. ಲಿಡಿಯ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಲೋರಿನ್ ಡಿ’ಸೋಜಾ, ಉಪ ಪ್ರಾಂಶುಪಾಲೆ ಜಾನೆಟ್ ಡಿ’ಸೋಜಾ ಸಂಘಟನಾ ಸಹಾಯಕ ಜೀವನ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಆಶಾ ಸಂಜೀವನ ಹಾಗೂ ಶಿಕ್ಷಕ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಧಾನ ಸಂಚಾಲಕಿ, ಸಂತ ಆಗ್ನೇಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಶೈಲಜಾ ಸ್ವಾಗತಿಸಿದರು. ವಿದ್ಯಾರ್ಥಿನಿ ಲಿಯೋನ ಡಿ’ಸೋಜಾ ನಿರೂಪಿಸಿ, ಭೂಮಿಕಾ ನಾರಾಯಣ್ ವಂದಿಸಿದರು.

    ವಿವಿಧ ಸ್ಪರ್ಧೆಗಳು:
    ಬಳಿಕ ಜರಗಿದ ಸಾಂಸ್ಕೃತಿಕ ವೈವಿಧ್ಯ, ವಿಜ್ಞಾನ ಪ್ರಹಸನ, ಭಾವಗೀತೆ, ಛಾಯಾಚಿತ್ರ ಗ್ರಹಣ, ಆಭರಣ ತಯಾರಿ, ಸಾಬೂನು ಕೆತ್ತನೆ, ಫ್ಯಾಶನ್ ಶೋ , ಸ್ಟಾರ್ ಆಫ್ ಆಗ್ನತಾನ್ ಮುಂತಾದ ಸ್ಪರ್ಧೆಗಳಲ್ಲಿ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಂಜೆ ಸಮಾರೋಪ ಸಮಾರಂಭ ಜರಗಿತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss