ಮಂಗಳೂರಿನ ಅಳಪೆ ಗ್ರಾಮದ ಬಜಾಲ್ ಜಲ್ಲಿಗುಡ್ಡೆಯಲ್ಲಿರುವ ಆದರ್ಶ ವಿದ್ಯಾನಿಲಯ ಶಾಲೆಯು ದುರುದ್ದೇಶದಿಂದ ಮುಚ್ಚಿದ್ದು ಅದನ್ನು ಶೀಘ್ರದಲ್ಲೇ ಪುನಃ ಆರಂಭಿಸುವಂತೆ ಒತ್ತಾಯಿಸುವ ಕುರಿತು ದಿನಾಂಕ-01-12-2023 ರಂದು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬರವರು
ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮಂಗಳೂರಿನ ಅಳಪೆ ಗ್ರಾಮದ ಬಜಾಲ್ ಜಲ್ಲಿಗುಡ್ಡೆಯಲ್ಲಿ ಗ್ರಾಮಾಂತರ ಪ್ರದೇಶದ ಅತೀ ಬಡವರಿಗೂ ವಿದ್ಯೆಯನ್ನು ಹೊಂದಲು ಅವಕಾಶವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಶಿಕ್ಷಣ ನೀಡುವ ಏಕ ಮಾತ್ರ ಧ್ಯೇಯವನ್ನಾಗಿಟ್ಟುಕೊಂಡು ಆರಂಭವಾದ “ಆದರ್ಶ ವಿದ್ಯಾವರ್ಧಕ ಸಂಘವು” ದಿನಾಂಕ ೧೫.೦೫.೧೯೭೦ ರಂದು ೪/೭೦-೭೧ನೇ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿತು. ತದನಂತರ ಆಡಳಿತ ಮಂಡಳಿಯು ಸ್ಥಳೀಯ ದಾನಿಯೊಬ್ಬರ ಮೂಲಕ ಅಳಪೆ ಗ್ರಾಮದ ಎರಡು ಎಕ್ರೆ ಸ್ಥಳವನ್ನು ಪಡೆದು ಚಿಕ್ಕ ಕೊಠಡಿಯನ್ನು ನಿರ್ಮಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮತಿ ಪಡೆದು ದಿನಾಂಕ ೦೫.೦೭.೧೯೭೦ ರಂದು “ಆದರ್ಶ ವಿದ್ಯಾನಿಲಯ ಪ್ರಾಥಮಿಕ ಶಾಲೆಯನ್ನು” ಪ್ರಾರಂಭಿಸಲಾಯಿತು.
ಮುಂದೆ ಸಾರ್ವಜನಿಕರ ನೆರವಿನಿಂದ ಕಟ್ಟಡ, ಪೀಠೋಪಕರಣಗಳನ್ನು ಹೊಂದಿ ಇಸವಿ ೧೯೭೬-೧೯೭೭ ರಲ್ಲಿ ಶಾಲೆಯನ್ನು ೭ನೇ ತರಗತಿಯವರೆಗೆ ವಿಸ್ತರಿಸಲಾಯಿತು. ಇಸವಿ ೧೯೭೩-೭೪ನೇ ಸಾಲಿನಲ್ಲಿ ಶಾಲೆಯು ಸರಕಾರದ ಅನುದಾನಕ್ಕೊಳಪಟ್ಟಿತು. ಆದರ್ಶ ವಿದ್ಯಾವರ್ಧಕ ಸಂಘವು ದಿನಾಂಕ ೦೭-೦೭-೧೯೮೧ ರಂದು “ಆದರ್ಶ ಭಾರತಿ ಪ್ರೌಢಶಾಲೆ”ಯನ್ನು ಸ್ಥಾಪಿಸಿ ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣವನ್ನು ಹೊಂದಲು ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು. ೧೯೯೭ ರಲ್ಲಿ ರಜತ ಮಹೋತ್ಸವ ಆಚರಿಸಿದ ಆದರ್ಶ ವಿದ್ಯಾನಿಲಯ ಹಿರಿಯ ಪ್ರಾಥಮಿಕ ಶಾಲೆಗೆ, ಕಟ್ಟಡದಿಂದ ಹಿಡಿದು ಮಕ್ಕಳ ಸಮವಸ್ತ್ರ, ಪಠ್ಯ, ಪುಸ್ತಕ ಹಾಗೂ ಇನ್ನಿತರ ಖರ್ಚುಗಳನ್ನು ಆಡಳಿತ ಮಂಡಳಿಯ ಸದಸ್ಯರು ಸ್ಥಳೀಯ ಸಂಘ ಸಂಸ್ಥೆಗಳು ದಾನಿಗಳು ನೀಡಿ ಸಹಕಾರ ನೀಡಿರುವುದು ಗಮನಾರ್ಹ. ಇಲ್ಲಿ ವಿದ್ಯೆ ಕಲಿತ ಮಕ್ಕಳು ಇಂದು ಸಮಾಜದಲ್ಲಿ ಒಳ್ಳೆ ಉದ್ಯೋಗ ಹೊಂದಿ, ಅಮೇರಿಕಾದಂತಹ ದೇಶದಲ್ಲಿ ನೆಲೆಸಿರುವುದು ಪ್ರಶಂಸನೀಯ. ಆದರೆ ಇಂತಹ ಉತ್ತಮ ಇತಿಹಾಸ ಹೊಂದಿರುವ ಆದರ್ಶ ಭಾರತಿ ವಿದ್ಯಾನಿಲಯ ಇಂದು ಅವಸಾನದ ಅಂಚಿಗೆ ತಲುಪಿದೆ ದಾನಿಗಳ ನೆರವಿನಿಂದ ಆರಂಭವಾದ ಕನ್ನಡ ಮಾಧ್ಯಮದ ಶಾಲೆಯು ಕೆಲವು ಆಡಳಿತ ಮಂಡಳಿಯ ಸದಸ್ಯರ ದುರುದ್ದೇಶದಿಂದ ಹಾಗೂ ಸ್ಥಾಪಿತ ಹಿತಾಸಕ್ತಿಗಳ ಕೈವಾಡದಿಂದ ಇಂದು ಮುಚ್ಚಲ್ಪಟ್ಟಿದ್ದು ಇಲ್ಲಿ ಕಲಿಯುತ್ತಿರುವ ಮಕ್ಕಳ ಸ್ಥಿತಿ ಅತಂತ್ರವಾಗಿದೆ. ಶಾಲೆಯಿರುವ ಈ ಜಾಗವನ್ನು ಕಬಳಿಸಿ ಅನ್ಯ ಉದ್ದೇಶಕ್ಕೆ ಬಳಸುವ ಪಿತೂರಿ ನಡೆದಿದೆಯೇ ಎಂಬುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಮಾತು. ಒಂದೆಡೆ “ಮಕ್ಕಳನ್ನು ಶಾಲೆಗೆ ಕಳಿಸಿ” ಎಂದು ಪ್ರತಿ ವರ್ಷ ಅಭಿಯಾನ ನಡೆಸುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಗಳ ಪಾಲಿಗೆ ಮಂಗಳೂರಿನ ರಜತ ಮಹೋತ್ಸವ ಆಚರಿಸಿದ ಆದರ್ಶ ವಿದ್ಯಾನಿಲಯ ಮುಚ್ಚಿರುವುದು ಹಾಗೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ಕಳಂಕವೇ ಸರಿ. ಆದುದರಿಂದ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯ ಮೂಲಕ ಕೋರುವುದೇನೆಂದರೆ ತಾವು ಮಂಗಳೂರಿನ ಅಳಪೆ ಗ್ರಾಮದ ಬಜಾಲ್ ಜಲ್ಲಿಗುಡ್ಡೆಯಲ್ಲಿರುವ ಆದರ್ಶ ವಿದ್ಯಾನಿಲಯದ ಜಾಗವನ್ನು ಅನ್ಯ ವಾಣಿಜ್ಯ ಉದ್ದೇಶಗಳಿಗೆ ಬಳಸದೆ ಸದರಿ ಪ್ರದೇಶದಲ್ಲಿ ಶಾಲೆಯನ್ನು ಪುನರ್ ಆರಂಭಿಸಬೇಕಾಗಿ ಒತ್ತಾಯಿಸಿ ಮನವಿ ಸಲ್ಲಿಸಿದರು. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಪ್ರತಿಭಟನೆ, ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹವನ್ನು ಸೇರಿದಂತೆ ನಿರಂತರ ವಿವಿಧ ರೀತಿಯ ಹಕ್ಕೊತ್ತಾಯ ಸಭೆ ಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯ ವಾಗುತ್ತದೆ. ಎಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಎಚ್ಚರಿಸಿದರು.