ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅಭಿನಯಗೆ ವರದಕ್ಷಿಣೆ ಕೇಸ್‌ನಲ್ಲಿ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅತ್ತಿಗೆಗೆ ವರದಕ್ಷಿಣೆ ಕಿರುಕುಳ ಕೊಟ್ಟ ಹಿನ್ನೆಲೆ ನಟಿ ಅಭಿನಯ ಕುಟುಂಬದ ಮೇಲೆ ಕೇಸ್ ದಾಖಲಾಗಿತ್ತು.
ಅನುಭವ ಚಿತ್ರದ ಮೂಲಕ ಖ್ಯಾತಿಗಳಿಸಿದ್ದ ನಟಿ ಅಭಿನಯಗೆ ದಶಕಗಳಿಂದ ಸಿನಿಮಾ ಮತ್ತು ಸೀರಿಯಲ್‌ನಲ್ಲಿ ನಟನೆ ಮಾಡ್ತಿದ್ದಾರೆ. ಅಭಿಯನ ಅವರ ಅಣ್ಣ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ಕಿರುಕುಳ ನೀಡಿದ ಆರೋಪ ಹಿನ್ನೆಲೆ 2002ರಲ್ಲಿ ಕೇಸ್ ದಾಖಲಾಗಿತ್ತು.
ಲಕ್ಷ್ಮೀದೇವಿ 1998ರಲ್ಲಿ ನಟಿ ಅಭಿನಯ ಸೋದರ ಶ್ರೀನಿವಾಸ್ ಜೊತೆ ವಿವಾಹವಾಗಿತ್ತು. ಮದುವೆ ವೇಳೆ 80 ಸಾವಿರ ರೂಪಾಯಿ ಹಾಗೂ 250 ಗ್ರಾಮ್ ಚಿನ್ನಾಭರಣವನ್ನ ವರದಕ್ಷಿಣೆ ರೂಪದಲ್ಲಿ ಪಡೆದಿದ್ದರು. ಬಳಿಕ 1 ಲಕ್ಷಕ್ಕೆ ಬೇಡಿಕೆ ಇಟ್ಟು 20 ಸಾವಿರ ಪಡೆದ ನಂತರವೂ ಕಿರುಕುಳ ನೀಡಿ ವರದಕ್ಷಿಣೆ ಪಡೆದಿದ್ದಲ್ಲದೆ ಲಕ್ಷ್ಮೀದೇವಿ ಅವರನ್ನ ಅವರ ಪೋಷಕರ ಮನೆಯಲ್ಲಿ ಬಿಟ್ಟಿದ್ದರು.
ಗಂಡನ ಮನೆಗೆ ಬಂದ ಲಕ್ಷ್ಮೀದೇವಿ ಹಾಗೂ ಪೋಷಕರಿಗೆ ಅವಮಾನ ಮಾಡಿದ ಆರೋಪ ಹಿನ್ನೆಲೆ
ಅಭಿನಯ ಸೇರಿ ಕುಟುಂಬದ ವಿರುದ್ಧ 2002ರಲ್ಲಿ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಚಾರ್ಜ್ ಶೀಟ್ ಸಲ್ಲಿಕೆಯಾಗಿ ಐವರು ಆರೋಪಿಗಳಿಗೆ 2012ರಲ್ಲಿ ಕೋರ್ಟ್ ತಲಾ 2 ವರ್ಷ ಶಿಕ್ಷೆ ಪ್ರಕಟಿಸಿತ್ತು. ನಂತರ ಜಿಲ್ಲಾ ನ್ಯಾಯಾಲಯಕ್ಕೆ ಐವರು ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ರು.
ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗಳನ್ನ ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ನೀಡಿದೆ. ಎ1-ಶ್ರೀನಿವಾಸ್ ಹಾಗೂ ಎ-2 ರಾಮಕೃಷ್ಣ ಸಾವನ್ನಪ್ಪಿದ ಹಿನ್ನಲೆ ಉಳಿದ ಮೂವರಾದ ನಟಿ ಅಭಿನಯ ಅವರ ತಾಯಿ ಎ-3 ಜಯಮ್ಮಗೆ 5 ವರ್ಷ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ ಎ-4 ಚೆಲುವರಾಜ್, ಎ-5 ಅಭಿನಯಾಗೆ 2 ವರ್ಷ ಜೈಲು ಹಾಗೂ ದಂಡ ವಿಧಿಸಿ ಆದೇಶಹೊರಡಿಸಿದೆ.