ಕಡಬ: ಕಡಬದ ಮುಖ್ಯ ಪೇಟೆಯಲ್ಲಿ ತೆವಳಿಕೊಂಡು ಹೋಗುತ್ತಿದ್ದ ವಿಶೇಷ ಚೇತನರೊಬ್ಬರ ಮೇಲೆಯೇ ಕಾರೊಂದು ಹರಿದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಘಟನೆ ಡಿಸೆಂಬರ್ 15ರ ಸಂಜೆ ನಡೆದಿದ್ದು, ಕಡಬದ ಅಂಗಡಿ ಮನೆ ನಿವಾಸಿ ಧರ್ನಪ್ಪ ಎಂಬವರು ಮೃತಪಟ್ಟವರು. ಮುಂಬೈ ಮೂಲದ ಕುಟುಂಬವೊಂದು ಮಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಕಡಬ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಕಡಬದ ಮುಖ್ಯ ಸರ್ಕಲ್ ಸಮೀಪ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರ ಅಣ್ಣ ಬೇಬಿ ನೀಡಿದ ದೂರಿನಂತೆ ಕಾರು ಚಾಲಕನ ವಿರುದ್ಧ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು ಸಿಸಿಟಿವಿ ದೃಶ್ಯ ಪಡೆಯಲು ಮುಂದಾಗಿದ್ದಾರೆ. ಕಡಬ ಮುಖ್ಯ ಪೇಟೆಯಲ್ಲಿ ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿರುವ ಸಿಸಿಟಿವಿ ಕೆಟ್ಟು ವರ್ಷವಾಗಿದ್ದು ಸ್ಥಳೀಯ ಅಂಗಡಿಯ ಸಿಸಿಟಿವಿ ದೃಶ್ಯ ಪಡೆದು ಪರಿಶೀಲನೆ ಮಾಡಿದ್ದಾರೆ.
©2021 Tulunada Surya | Developed by CuriousLabs