ಉಡುಪಿ: ಹದಿನೈದು ಅಡಿ ಆಳದ ತ್ಯಾಜ್ಯ ನೀರು ಸಂಗ್ರಹಣ ಗುಂಡಿಯಲ್ಲಿ ಬಿದ್ದಿದ್ದ ಗೂಳಿಯನ್ನು ಅಗ್ನಿಶಾಮಕ ದಳ, ಹಾಗೂ ನಾಗರಿಕ ಸಮಿತಿಯ ಕಾರ್ಯಕರ್ತರು ಸತತ ಮೂರು ಗಂಟೆಗಳ ಕಾರ್ಯಚರಣೆ ಮೂಲಕ ರಕ್ಷಿಸಿರುವ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ.
ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಹೇಮಂತ್ ಸದಾನಂದ ಭಂಡಾರಿ ಇದ್ದರು.
ಎರಡು ಬಲಿಷ್ಠ ಗೂಳಿಗಳು ಕಾದಾಟ ನಡೆಸುತ್ತಿದ್ದವು. ಕಾದಾಟ ಮುಂದುವರಿಸುತ್ತ ಎರಡು ಗೂಳಿಗಳು ಆರ್.ಎಸ್.ಬಿ ಸಂಭಾಗಣದ ಸನಿಹ ಇರುವ ಕಂಪೌಂಡಿನ ಬಾಗಿಲು ತಳ್ಳಿಕೊಂಡು ಒಳ ಪ್ರವೇಶಿಸಿವೆ.
ಕಾದಾಟದಲ್ಲಿ ನಿಯಂತ್ರಣ ಕಳೆದುಕೊಂಡ ಗೂಳಿಯೊಂದು ಆಯಾತಪ್ಪಿ ಗುಂಡಿಗೆ ಬಿದ್ದಿದೆ. ಗೂಳಿಯ ಆಕ್ರೋಶ ತಣಿಸಲು ಅರವಳಿಕೆಯನ್ನು ಪಶುವೈದ್ಯ ಡಾ.ಪ್ರಶಾಂತ್ ಶೆಟ್ಟಿ ಅವರು ನೀಡಿದರು. ಆ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಗಳು ಕ್ರೇನ್ ಬಳಿಸಿಕೊಂಡು ಗೂಳಿಯನ್ನು ರಕ್ಷಿಸಿದರು.
