ಪಾಟ್ನಾ: ಬುದ್ಧಿವಂತಿಕೆಯಿಂದ ಯೋಜಿತವಾಗಿ ಕಷ್ಟಪಟ್ಟು ಮಾಡಿದರೆ ಸ್ವ ಉದ್ಯೋಗ ಉತ್ತಮ ಆಯ್ಕೆ. ಹೀಗೆ ಸ್ವ ಉದ್ಯೋಗ ಮಾಡುತ್ತಿರುವ 28 ವರ್ಷದ ಯುವಕ ನಿತಿಲ್ ಭಾರದ್ವಾಜ್ ಬಿಹಾರದ ಬಗಾ ಜಿಲ್ಲೆಯಲ್ಲಿ ಯುವಕರಿಗೆ ಮಾದರಿಯಾಗಿದ್ದಾರೆ.
ದೆಹಲಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸಾಕಷ್ಟು ವೇತನ ಬರುವ ಉದ್ಯೋಗದಲ್ಲಿದ್ದ ನಿತಿಲ್ ಭಾರದ್ವಾಜ್ ಕಳೆದ ವರ್ಷ ತಮ್ಮ ಹಳ್ಳಿಗೆ ಹಿಂತಿರುಗಿ ತಮ್ಮ ಹಳ್ಳಿಯ ಕೊಳದಲ್ಲಿ ‘ಮುತ್ತು ಕೃಷಿ’ಯನ್ನು ಆರಂಭಿಸಿದರು.
ಭಾರತೀಯರು ಆತ್ಮನಿರ್ಭರರಾಗಬೇಕು ಎಂದು ಪ್ರಧಾನಿ ಮೋದಿಯವರು ನೀಡಿದ ಕರೆಯಿಂದ ಪ್ರಭಾವಿತರಾದ ಈ ಯುವಕ ಸ್ಥಳೀಯ ವಸ್ತುಗಳಿಂದ ಸ್ವ ಉದ್ಯೋಗ ಮಾಡಲು ಆರಂಭಿಸಿದರು. ಮುತ್ತು ಕೃಷಿ ಬಗ್ಗೆ ಹತ್ತು ಹಲವು ಕಡೆಗಳಿಂದ ಮಾಹಿತಿ ಪಡೆದು ಸಂಶೋಧನೆ ಮಾಡಿ, ಕೆಲ ತರಬೇತಿ ಪಡೆದು ಆರಂಭಿಸಿದರು.
ಕೊರೋನಾ ಲಾಕ್ ಡೌನ್ ಸಮಯದಲ್ಲಿ ಊರಿಗೆ ಮರಳಿದ್ದ 6 ಮಂದಿ ವಲಸೆ ಕಾರ್ಮಿಕರ ನೆರವಿನಿಂದ ನಿತಿಲ್ ಭಾರದ್ವಾಜ್ ಮುತ್ತು ಕೃಷಿ ಪ್ರಾರಂಭಿಸಿದರು. ಕಳೆದೊಂದು ವರ್ಷದಿಂದ ಅದನ್ನೇ ಮಾಡುತ್ತಿದ್ದಾರೆ. ಒಂದು ಎಕರೆ ಜಮೀನಿನಲ್ಲಿರುವ ಕೊಳದಲ್ಲಿ ಮುತ್ತು ಬೆಳೆಸಲಾರಂಭಿಸಿದರು. ಇದನ್ನು ಸರಿಯಾಗಿ ಬೆಳೆಸಿದರೆ 8ರಿಂದ 10 ತಿಂಗಳಲ್ಲಿ 30ರಿಂದ 35 ಲಕ್ಷ ಬೆಳೆಯಬಹುದು ಎನ್ನುತ್ತಾರೆ ನಿತಿಲ್.
ನಿತಿಲ್ ಬಾತುಕೋಳಿ ಸಾಕಾಣಿಕೆ, ಕೋಳಿ ಮತ್ತು ಮೀನು ಸಾಕಾಣಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಕೆಲಸಗಳು ಅವರಿಗೆ ಮತ್ತು ಇತರರಿಗೆ ಆರ್ಥಿಕ ಪರಿಸ್ಥಿತಿಗಳನ್ನು ಬದಲಾಯಿಸಿದೆ.
ಕೇರಳದಲ್ಲಿ ಸಿಹಿನೀರಿನಲ್ಲಿ ಹೆಚ್ಚಾಗಿ ಮುತ್ತು ಸಾಕಾಣಿಕೆ ಮಾಡಲಾಗುತ್ತದೆ. ಕೊಳಗಳು ಮತ್ತು ಇತರ ಜಲಮೂಲಗಳು ಹರಡಿಕೊಂಡಿರುವ ಬಿಹಾರದಂತಹ ರಾಜ್ಯಗಳಲ್ಲಿ ಮುತ್ತು ಸಾಕಾಣಿಕೆ ಅತ್ಯುತ್ತಮ ಜಲಚರ ಸಾಕಣೆ ವ್ಯವಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಔಪಚಾರಿಕ ತರಬೇತಿ ಮತ್ತು ಸರ್ಕಾರದಿಂದ ಆರ್ಥಿಕ ನೆರವು ಬೇಕು ಎಂದು ನಿತಿಲ್ ಭಾರದ್ವಾಜ್ ಹೇಳುತ್ತಾರೆ.
ಮುತ್ತಿನ ವಿನ್ಯಾಸಕ್ಕೆ ತಕ್ಕಂತೆ ಒಂದು ಮುತ್ತಿಗೆ 250 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತೇನೆ ಎಂದು ನಿತಿಲ್ ಹೇಳುತ್ತಾರೆ. ನಿತಿಲ್ ಕುಟುಂಬ ಇದೇ ಕೃಷಿಯಲ್ಲಿ ತೊಡಗಿದೆ. ವಲಸೆ ಕಾರ್ಮಿಕರಿಗೆ ಇದರಲ್ಲಿ ತರಬೇತಿ ನೀಡಿ ಅವರ ಗ್ರಾಮದಲ್ಲಿ ಕೂಡ ಮಾಡುವಂತೆ ಪ್ರೋತ್ಸಾಹಿಸುತ್ತಾರೆ.
ನಿತಿಲ್ ಅವರ ಮುತ್ತಿನ ಗುಣಮಟ್ಟಕ್ಕೆ ಕೋಲ್ಕತ್ತಾ, ಮುಂಬೈ ಮತ್ತು ದೆಹಲಿಯಿಂದ ವ್ಯಾಪಾರಿ ಗ್ರಾಹಕರು ಬರುತ್ತಾರೆ. ಇವರ ಬಳಿಯಿಂದ ವ್ಯಾಪಾರಿಗಳು ತೆಗೆದುಕೊಂಡು ಅದಕ್ಕೆ ಪಾಲಿಷ್ ಮಾಡಿ ವಿನ್ಯಾಸ ನೀಡಿ ಚೀನಾ, ಜಪಾನ್ ನಂತಹ ದೇಶಗಳಿಗೆ ರಫ್ತು ಮಾಡುತ್ತಾರೆ.