ಉಡುಪಿ: ಜಿಲ್ಲೆಯಲ್ಲಿ 75ನೇ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಪೂರ್ವತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ವಾತ್ರಂತ್ರೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆ ನಡೆಯಿತು.ದೇಶದ 75ನೇ ಸ್ವಾತ್ರಂತ್ರೋತ್ಸವ ಕಾರ್ಯಕ್ರಮವನ್ನು ಈ ಬಾರಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಆಗಸ್ಟ್ 15ರಂದು ಬೆಳಗ್ಗೆ 9 ಗಂಟೆಗೆ ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಸ್ವಾತ್ರಂತ್ರೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕ, ಎನ್ಸಿಸಿ ಸೇರಿದಂತೆ ವಿವಿಧ ತಂಡಗಳಿಂದ ಪಥ ಸಂಚಲನ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಜೃತಿಕ ಕಾರ್ಯಕ್ರಮಗಳು ವಿಶೇಷವಾಗಿ ನಡೆಯಲಿವೆ ಎಂದರು.
ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಮುಖಂಡರುಗಳಿಗೆ ಶಿಷ್ಠಾಚಾರದಂತೆ ಆಹ್ವಾನಿಸಬೇಕು ಎಂದ ಅವರು ಎಸೆಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಬೇಕು ಎಂದರು.
ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.
