ಮಂಗಳೂರು: ಜನಸೇವೆ ಹಾಗೂ ತುಳುನಾಡ ಭಾಷೆ,ಸಂಸ್ಕೃತಿ ಪರ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ತುಳುನಾಡ ರಕ್ಷಣಾ ವೇದಿಕೆಯ ಅಂತರ್ರಾಷ್ಟ್ರೀಯ ಘಟಕದ ಗೌರವಾಧ್ಯಕ್ಷರಾಗಿ ತುಳು ಚಲನಚಿತ್ರ ನಿರ್ಮಾಪಕ,ಸಮಾಜ ಸೇವಕ ದುಬಾಯಿಯ ಪ್ರತಿಷ್ಠಿತ ಉದ್ಯಮಿ ಡಾ|| ಫ್ರಾಂಕ್ ಫೆರ್ನಾಂಡಿಸ್ 5ನೇ ಬಾರಿಗೆ ಅವಿರೋಧ ಆಯ್ಕೆಯಾಗಿದ್ದಾರೆ.

ಯುವ ಸಂಘಟಕ ಯೋಗೀಶ್ ಶೆಟ್ಟಿ ಜಪ್ಪುರವರು 2009ರಲ್ಲಿ “ತುಳುನಾಡ ರಕ್ಷಣಾ ವೇದಿಕೆ” ಎಂಬ ಜನಪರ – ಜೀವಪರ ಸಂಘಟನೆಯನ್ನು ಸ್ಥಾಪಿಸಿದ್ದು ಹಂತಹಂತವಾಗಿ ಬೆಳೆದ ಈ ಸಂಘಟನೆ ಇದೀಗ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯುವಘಟಕ, ಮಹಿಳಾ ಘಟಕ, ಮಾಲಕರ ಘಟಕ, ಕ್ಷೇತ್ರವಾರು ಘಟಕಗಳನ್ನೊಳಗೊಂಡು ಬಲಿಷ್ಠವಾಗಿ ಬೆಳೆದು ನಿಂತಿದೆ. ಅಲ್ಲದೆ ದುಬೈ ಸಹಿತ ಹೊರರಾಷ್ಟ್ರಗಳಲ್ಲೂ ಸಕ್ರಿಯ ಕಾರ್ಯಕರ್ತರ ತಂಡವನ್ನು ಹೊಂದಿದೆ. ಜಾತಿ, ಮತ, ಧರ್ಮ ಭೇದವಿಲ್ಲದೆ ಸಾವಿರಾರು ಕಾರ್ಯಕರ್ತರು ಈ ಸಂಘಟನೆಯ ಮೂಲಕ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮಾಜಮುಖಿ ಸೇವೆ: ಬಡವರ, ದೀನದಲಿತರ, ಅನಾಥರ, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಅನ್ಯಾಯ ಎಲ್ಲೇ ನಡೆದರೂ ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ತಕ್ಷಣ ಅಲ್ಲಿ ಹಾಜರಾಗಿ, ನ್ಯಾಯಪರ ಹೋರಾಟ ನಡೆಸುತ್ತಾರೆ.

ಅಸಮರ್ಪಕ ಅನಿಲ ವ್ಯವಸ್ಥೆ, ಮೆಡಿಕ್ಲೈಮ್ ಇನ್ಸೂರೆನ್ಸ್ ಕಂಪೆನಿಯ ಅನ್ಯಾಯ, ರಾಷ್ಟ್ರೀಯ ಹೆದ್ದಾರಿಯ ತೇಪೆ ಕಾಮಗಾರಿ ವಿರುದ್ಧ ಧರಣಿ, ಅಸಮರ್ಪಕ ರಸ್ತೆ ವ್ಯವಸ್ಥೆ, ನೀರಿನ ಸಮಸ್ಯೆ ವಿರುದ್ಧ ಹೋರಾಟ, ಹೆದ್ದಾರಿ ಅಗಲೀಕರಣ ವೇಳೆ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಮೊತ್ತ ಒದಗಲು ವೃಕ್ಷ ಬಿಸಿನೆಸ್ ಸೊಲ್ಯೂಶನ್ ಸೇರಿದಂತೆ ಇಂತಹ ಕೆಲವು ಬೋಗಸ್ ಹಣಹೂಡಿಕೆ ಕಂಪೆನಿಗಳ ವಿರುದ್ಧ ಹೋರಾಟ, ಕಾರ್ಮಿಕರ, ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಸ್ಪಂದನೆ, ಜಿಲ್ಲಾದ್ಯಂತ ಹದಗೆಟ್ಟ ರಸ್ತೆ, ಒಳಚರಂಡಿ ಅಸಮರ್ಪಕ ನೀರು ಪೂರೈಕೆ ವಿರುದ್ಧ ಹೋರಾಟ ಜಪ್ಪು ಕುಡುಪಾಡಿ ಕಟ್ಟಪುಣಿ ಹಾಗೂ ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ನಿರ್ಮಾಣಕ್ಕಾಗಿ ಹೋರಾಟ, ಪೊಲೀಸು, ಸರಕಾರಿ ನೌಕರರಿಗೆ ಮಾಧ್ಯಮ ಪ್ರತಿನಿಧಿಗಳಿಗೆ, ಅನ್ಯಾಯವಾದಾಗ ಸ್ಪಂದನೆ,

ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದವರು ವಂಚನೆಗೊಳಗಾದಾಗ ವೀಸಾ ಏಜೆಂಟರುಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಪರಿಹಾರ, ತುಳು ಫಿಲ್ಮ್ ನಿರ್ಮಾಪಕರು ಸಂಘ, ತುಳು ಫಿಲ್ಮ್ ಚೇಂಬರ್ ಸ್ಥಾಪನೆಗೆ ಒತ್ತಾಯ, ಭಾರತಿ ಶಿಪ್ಯಾರ್ಡ್ ವಿರುದ್ಧ ಹೋರಾಟ, ಎತ್ತಿನ ಹೊಳೆ ಯೋಜನೆ ವಿರುದ್ಧ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಧ್ವನಿಯಾಗಿ ಸಂಘಟನೆಯು ಕಾರ್ಯ ನಿರ್ವಹಿಸುತ್ತಿದೆ. ,


ಪ್ರತೀ ವರ್ಷ ತುಳುನಾಡ ರಕ್ಷಣಾ ವೇದಿಕೆಯ ಮುಖಂಡರುಗಳು ತಮ್ಮ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರ, ಅನಾಥಾಶ್ರಮ, ಭಗಿನಿ ಸಮಾಜದಂಥ ಸಂಸ್ಥೆಗಳಿಗೆ ಹಣ್ಣು ಹಂಪಲು ಸಹಿತ ಇತರ ಸವಲತ್ತು ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ರಾಣಿ ಅಬ್ಬಕ್ಕದೇವಿ ಸೇರಿದಂತೆ ಹಲವು ಹೋರಾಟಗಾರರ ನೆನಪಿನ ಕಾರ್ಯಕ್ರಮಗಳು, ಕಾನೂನು ಮಾಹಿತಿ ಶಿಬಿರಗಳ ಆಯೋಜನೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳನ್ನು ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಎಪ್ರಿಲ್ 5,1937ರಂದು ಕಲ್ಯಾಣಸ್ವಾಮಿ, ಕೆದಂಬಾಡಿ ರಾಮೇಗೌಡ, ಲಕ್ಷಪ್ಪ ಬಂಗರ¸ ಹುಲಿಕುಂದ ನಂಜಯ್ಯೆ, ಉಪ್ಪಿನಂಗಡಿ ಮಂಜೆರವರ ನೇತೃತ್ವದಲ್ಲಿ ಸಾವಿರಾರು ಸ್ವಾತಂತ್ರ್ಯಹೋರಾಟಗಾರರು ಬಾವುಟಗುಡ್ಡೆಯಲ್ಲಿ ಬ್ರಿಟಿಷ್ ಬಾವುಟವನ್ನು ಕೆಳಗಿಳಿಸಿ, ತುಳುನಾಡ ಸ್ವಾತಂತ್ರ್ಯಬಾವುಟವನ್ನು ಹಾರಿಸಿದ ದಿನದ ನೆನಪಿನ ಕಾರ್ಯಕ್ರಮವನ್ನು ತುಳುನಾಡ ರಕ್ಷಣಾ ವೇದಿಕೆ ಆಶ್ರಯದಲ್ಲಿ ತುಳುನಾಡ ಧ್ವಜ ದಿನಾಚರಣೆಯನ್ನು ಕಳೆದ 8 ವರ್ಷಗಳಿಂದ ವರ್ಷಂಪ್ರತಿ ಆಚರಿಸಲಾಗುತ್ತಿದೆ.
ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡುವ ದೃಷ್ಟಿಯಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ “ತುಳುನಾಡ ಕಬಡ್ಡಿ” ಎಂಬ ಕ್ರೀಡೆಯನ್ನು ಆಯೋಜಿಸಲಾಗಿತ್ತು.

“ತೌಳವ ಉಚ್ಛಯ” ಸಂಭ್ರಮ: ಅಂತರ್ರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾದ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ರವರ ಮಾರ್ಗದರ್ಶನ ಹಾಗೂ ತನ-ಮನ-ಧನ ಸಹಕಾರದೊಂದಿಗೆ ದಶಮಾನೋತ್ಸವ ಅಂಗವಾಗಿ “ತೌಳವ ಉಚ್ಛಯ” ಎಂಬ 3 ದಿನದ ತುಳು ಸಮ್ಮೇಳನವನ್ನು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದು, 3 ದಿನಗಳಲ್ಲಿ ದೇಶ – ವಿದೇಶಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.


ಕೊಡಗಿನಲ್ಲಿ ಸಂಭವಿಸಿದ ಜಲಪ್ರವಾಹ ಮತ್ತು ಗುಡ್ಡಕುಸಿತ ಸಂದರ್ಭದಲ್ಲಿ ಸುಮಾರು ರೂ. 3.00ಲಕ್ಷಕ್ಕಿಂತ ಹೆಚ್ಚಿನ ಪಡಿತರ, ಔಷಧಿ, ದಿನನಿತ್ಯದ ಸಾಮಾಗ್ರಿಗಳನ್ನು ವಿತರಿಸಲಾಗಿತ್ತು.
ದುಬಾಯಿಯಲ್ಲೂ ರಕ್ತದಾನ ಶಿಬಿರ: ತುಳುನಾಡ ರಕ್ಷಣಾ ವೇದಿಕೆ ಕಳೆದ 12 ವರ್ಷಗಳಲ್ಲಿ ದುಬಾಯಿ ಲತೀಫಾ ಹಾಸ್ಪಿಟಲ್ ಸೇರಿದಂತೆ ದೇಶ-ವಿದೇಶದ ಹಲವಾರು ಆಸ್ಪತ್ರೆಗಳ ಬ್ಲಡ್ಬ್ಯಾಂಕ್ ಸಹಕಾರದೊಂದಿಗೆ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ, ಕ್ಯಾನ್ಸರ್ ಸೇರಿದಂತೆ ಹಲವಾರು ರೀತಿಯ ಖಾಯಿಲೆಗಳಿಗೀಡಾದ ಜನರಿಗೆ ಲಕ್ಷಾಂತರ ರೂಪಾಯಿಗಳ ಸಹಾಯಧನವನ್ನು ಕೂಡಾ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿತರಿಸಲಾಗಿತ್ತು.
ಕೊರೊನ ಲಾಕ್ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಉಚಿತ ಪಡಿತರ ಕಿಟ್ಗಳನ್ನು ವಿತರಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆಯು ಅಂತರ್ರಾಷ್ಟ್ರೀಯ ಘಟಕದ ಗೌರವಾಧ್ಯಕ್ಷರಾದ ಡಾ|| ಫ್ರಾಂಕ್ ಫೆರ್ನಾಂಡಿಸ್ರವರ ಮಾರ್ಗದರ್ಶನದಲ್ಲಿ, ಅಧ್ಯಕ್ಷರಾದ ಶೀ ಯೋಗೀಶ್ ಶೆಟ್ಟಿಯವರ ನೇತೃತ್ವದಲ್ಲಿ ಪದಾಧಿಕಾರಿಗಳ ಸರ್ವತೋಮುಖ ಸಹಭಾಗಿತ್ವದಲ್ಲಿ ಇದೀಗ ಯಶಸ್ವಿಯಾಗಿ ಮುನ್ನಡೆಯುತ್ತಿದೆ