ಉಡುಪಿ: ಎರಡು ವರ್ಷಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಬ್ರಹ್ಮಾವರ ನಾಲ್ಕುದ್ರು ನಿವಾಸಿ ಭಾಸ್ಕರ ನಾಯ್ಕಾ ಶಿಕ್ಷೆಗೆ ಗುರಿಯಾದ ಆರೋಪಿ. ಟ್ಯಾಕ್ಸಿಕ್ಯಾಬ್ ಬಾಡಿಗೆ ನಡೆಸುತ್ತಿದ್ದ ಈತ ಶಾಲಾ ವಿದ್ಯಾರ್ಥಿಗಳನ್ನು ಶಾಲೆಗೆ ಬಿಡುವ ಕೆಲಸ ಮಾಡುತ್ತಿದ್ದನು.
2020ರ ಎ.18ರಂದು ಈತ ನೊಂದ ಬಾಲಕಿಯ ಸಂಬಂಧಿಕರ ಮನೆಗೆ ಶುಭ ಸಮಾರಂಭಕ್ಕೆ ತನ್ನ ಕ್ಯಾಬ್‌ನೊಂದಿಗೆ ಬಾಡಿಗೆಗೆ ಬಂದಿದ್ದನು. ನೊಂದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿದ್ದನು. ಬಳಿಕ ಆಕೆಯನ್ನು ಹೆದರಿಸಿ ಕರೆದುಕೊಂಡು ಹೋಗಿ ಸಂತೆಕಟ್ಟೆ -ಪೆರ್ಡೂರು ರಸ್ತೆ ಬದಿಯಲ್ಲಿ ತನ್ನ ವಾಹನದಲ್ಲಿಯೇ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದನು.
ಅನಂತರ ಆಕೆ ಶಾಲೆಗೆ ಹೋಗುತ್ತಿರುವಾಗ ತನ್ನ ಕ್ಯಾಬ್ ನಲ್ಲಿ ಹತ್ತಿಸಿಕೊಂಡು ಹೋಗಿ ಬಾರಕೂರು-ಹಾಲಾಡಿ ರಸ್ತೆ ಬದಿ ಮತ್ತು ಆಲ್ತಾರು ಕ್ರಾಸ್ ಬಳಿ ವಾಹನದಲ್ಲಿಯೇ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿದ್ದನು. ಈ ವಿಚಾರ ವನ್ನು ಯಾರಲ್ಲೂ ಹೇಳದಂತೆ ಬೆದರಿಕೆ ಹಾಕಿದ್ದನು. ಅದೇ ದಿನ ನೊಂದ ಬಾಲಕಿಯ ತಮ್ಮ ತನ್ನ ಅಕ್ಕ ಶಾಲೆಗೆ ಬಂದಿಲ್ಲ ಎಂದು ತಾಯಿ ಬಳಿ ತಿಳಿಸಿದ್ದು, ಈ ಬಗ್ಗೆ ವಿಚಾರಿಸಿದಾಗ ಪ್ರಕರಣದ ಬಗ್ಗೆ ನೊಂದ ಬಾಲಕಿ ತಿಳಿಸಿದ್ದಳು. ಅದರಂತೆ ದೂರು ದಾಖಲು ಮಾಡಲಾಗಿತ್ತು.
ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆತ ನ್ಯಾಯಾಲಯ ದಿಂದ ಜಾಮೀನು ಪಡೆದುಕೊಂಡಿದ್ದನು. ಅಂದಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ತನಿಖೆ ನಡೆಸಿದ್ದು, ನಂತರ ಪೊಲೀಸ್ ನಿರೀಕ್ಷಕ ಸೀತಾರಾಮ್ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 28 ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ನಡೆಸ ಲಾಯಿತು. ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 20ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು. ಪ್ರಾಸಿಕ್ಯೂಶನ್ ಪರ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.