ಬೆಂಗಳೂರು: ನಾಳೆ ಸೋಮವಾರ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಹಮ್ಮಿಕೊಳ್ಳಲಾಗಿದೆ. ಕುಟುಂಬಸ್ಥರು ಭಾರೀ ತಯಾರಿ ನಡೆಸುತ್ತಿದ್ದಾರೆ. ಅಭಿಮಾನಿಗಳ ಅಪ್ಪು ಅಸ್ತಂಗತರಾಗಿ ಇಂದಿಗೆ ಹತ್ತು ದಿನ ಕಳೆದಿದೆ. ಈಗಲೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಬರುತ್ತಿದ್ದಾರೆ.
ಈಗಾಗಲೇ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸ ಬಳಿ ಶಾಮಿಯಾನ ಹಾಕಿ ಸಿದ್ಧತೆ ನಡೆಸಲಾಗುತ್ತಿದೆ. ನಾಳೆ ಬೆಳಗ್ಗೆ 9 ಅಥವಾ 10 ಗಂಟೆಯೊಳಗೆ ನಿವಾಸದಲ್ಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಳಿಕ ಬೆಳಗ್ಗೆ 11 ಅಥವಾ 12 ಗಂಟೆಯೊಳಗೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತಲುಪಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಅಪ್ಪು ಆಪ್ತ ವಲಯ ಹಾಗೂ ಚಿತ್ರರಂಗದ ಗಣ್ಯರು ಹಾಗೂ ಕುಟುಂಬಸ್ಥರಿಗೆ ಮಾತ್ರ ಪೂಜೆ ವೇಳೆ ಸಮಾಧಿ ಸ್ಥಳ ಪ್ರವೇಶಕ್ಕೆ ಅವಕಾಶ ಇದೆ.
