ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಚುನಾವಣೆಗೆ ಸಂಬಂಧಿಸಿದ ಜಪ್ತಿ ಸುಮಾರು 100 ಕೋಟಿ ರೂ.ಗೆ ತಲುಪಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ತಿಳಿಸಿದೆ. ಮಾರ್ಚ್ 29 ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಾಗಿನಿಂದ 99.18 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಇಒ ದೈನಂದಿನ ಬುಲೆಟಿನ್ ನಲ್ಲಿ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತಿ ಜಾರಿಗೆ ಬಂದ ಕೇವಲ 10 ದಿನಗಳಲ್ಲಿ 36.8 ಕೋಟಿ ನಗದು, 15.46 ಕೋಟಿ ಮೌಲ್ಯದ ಉಚಿತ ವಸ್ತುಗಳು, 30 ಕೋಟಿ ಮೌಲ್ಯದ 5.2 ಲಕ್ಷ ಲೀಟರ್ ಮದ್ಯ, 15 ಕೋಟಿ ಮೌಲ್ಯದ ಚಿನ್ನ ಮತ್ತು 2.5 ಕೋಟಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 34 ಲಕ್ಷ ನಗದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ 21 ಲಕ್ಷ ಮೌಲ್ಯದ 56 ಟಿವಿಗಳನ್ನು ಸ್ಥಿರ ಕಣ್ಗಾವಲು ತಂಡ ಭಾನುವಾರ ವಶಪಡಿಸಿಕೊಂಡಿದೆ. ಮೌಲ್ಯದ 54,282 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ.
