ಮಂಗಳೂರು, ಜೂನ್ 9: ನಗರದ ಖ್ಯಾತ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ಗೆ ಒಳಪಡಿಸಿ ಖಾಸಗಿ ಫೋಟೋ ಹಾಗೂ ವಿಡಿಯೊಗಳನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ನಡೆಸಿ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಉದ್ಯಮಿ ನೀಡಿದ ದೂರಿನ ಪ್ರಕಾರ, 2024ರಲ್ಲಿ ಜಿತೇಶ್ ಎಂಬಾತ ಉದ್ಯಮಿಯ ಖಾಸಗಿ ಫೋಟೋ ಮತ್ತು ವಿಡಿಯೊಗಳನ್ನು ತನ್ನ ವಶದಲ್ಲಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ಈ ದೃಶ್ಯಗಳನ್ನು ಉದ್ಯಮಿಯ ಪತ್ನಿಗೆ ತೋರಿಸುವುದಾಗಿ ಬೆದರಿಕೆ ಹಾಕಿ ಆರಂಭದಲ್ಲಿ ₹35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿಚಾರವನ್ನು ಉದ್ಯಮಿ ತನ್ನ ಪರಿಚಯಸ್ಥನಾದ ನಿಝಾಮ್ಗೆ ತಿಳಿಸಿದ ಬಳಿಕವೂ ಸಮಸ್ಯೆ ಬಗೆಹರಿಯದೇ, ನಿಝಾಮ್ ಕೂಡ ಜಿತೇಶ್ ಜೊತೆ ಸೇರಿ ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿ, ಆತ ಬರೆದಿದ್ದಾನೆ ಎನ್ನಲಾದ ಡೆತ್ ನೋಟ್ನಲ್ಲಿ ಉದ್ಯಮಿಯ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿ ಭಯ ಹುಟ್ಟಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬೆದರಿಕೆ ಹಾಗೂ ಒತ್ತಡದ ಪರಿಣಾಮವಾಗಿ ಉದ್ಯಮಿ ವಿವಿಧ ಹಂತಗಳಲ್ಲಿ ಹಣ ಪಾವತಿಸಿದ್ದು, 2024ರಿಂದ 2026ರ ಅವಧಿಯಲ್ಲಿ ಒಟ್ಟು ₹2.77 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಆರೋಪಿಗಳಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಆದರೆ, ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿದ್ದ ಉದ್ಯಮಿಗೆ 2026ರ ಜೂನ್ ತಿಂಗಳಲ್ಲಿ ಜಿತೇಶ್ ಜೀವಂತವಾಗಿ ಕಾಣಿಸಿಕೊಂಡಾಗ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಉದ್ಯಮಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹನಿಟ್ರ್ಯಾಪ್ ಹಾಗೂ ಹಣ ವಸೂಲಿ ಸಂಚು ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ನಿಝಾಮ್ ಮತ್ತು ಜಿತೇಶ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇತರ ಆಯಾಮಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಹಾಗೂ ತನಿಖೆಯ ವಿವರಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.
