ಮಂಗಳೂರು, ಮೇ 9: ಮೇ 10ರಿಂದ ರಾಜ್ಯದಲ್ಲಿ ಫುಲ್ ಲಾಕ್ಡೌನ್ ಜಾರಿಯಾಗುತ್ತಿದ್ದು ಬೆಳಗ್ಗೆ ಸಾಮಗ್ರಿ ಖರೀದಿಗೂ ವಾಹನ ರಸ್ತೆಗೆ ಇಳಿಸುವಂತಿಲ್ಲ ಎಂಬ ನಿಯಮ ಹೇರಿರುವುದು ಜನರ ಗೊಂದಲಕ್ಕೆ ಕಾರಣವಾಗಿದೆ. ಬೆಳಗ್ಗಿನ ಹೊತ್ತಲ್ಲಿ ದಿನಸಿ ಸಾಮಗ್ರಿ ಪಡೆಯುವುದಕ್ಕೂ ವಾಹನ ಉಪಯೋಗಿಸುವಂತಿಲ್ಲ ಎಂಬ ನಿಯಮದ ಬಗ್ಗೆ ಬಹಳಷ್ಟು ಜನ ಆಕ್ಷೇಪದ ಮಾತನ್ನಾಡಿದ್ದಾರೆ. ವಯಸ್ಸಿನವರು ಸಾಮಗ್ರಿಗಳನ್ನು ಹೊತ್ತುಕೊಂಡು ಬರುವುದು ಹೇಗೆಂಬ ಮಾತನ್ನು ಮುಂದಿಟ್ಟಿದ್ದಾರೆ.
ಈ ಬಗ್ಗೆ ಬಹಳಷ್ಟು ಮಂದಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತಂದಿದ್ದು, ಆದಷ್ಟು ಸಾಮಗ್ರಿ ಖರೀದಿಯನ್ನು ಸ್ಥಳೀಯವಾಗಿಯೇ ಮಾಡಿ. ಅಗತ್ಯ ಬಿದ್ದವರು ಮಾತ್ರ ವಾಹನ ಉಪಯೋಗಿಸಿ ಎಂದು ಸಲಹೆ ನೀಡಿದ್ದರು. ಆದರೆ, ಈ ಬಗ್ಗೆ ಜಿಲ್ಲಾಧಿಕಾರಿ ಇನ್ನೂ ಸ್ಪಷ್ಟನೆ ನೀಡದ ಹೊರತು ಇದು ಸಾಧ್ಯವೇ, ನಾಳೆ ವಾಹನ ಸೀಜ್ ಮಾಡಿದರೆ ಹೇಗೆ ಎಂಬ ಬಗ್ಗೆ ಕೆಲವರು ಮಾಧ್ಯಮದ ಮಂದಿಗೆ ಉತ್ತರ ಕೇಳಿ ಫೋನ್ ಮಾಡಿದ್ದರು.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ರಾಜ್ಯ ಸರಕಾರ ನೀಡಿರುವ ಗೈಡ್ ಲೈನ್ಸ್ ಪ್ರಕಾರ ಯಾರು ಕೂಡ ವಾಹನ ಬಳಕೆ ಮಾಡುವಂತಿಲ್ಲ. ಬೆಳಗ್ಗಿನ ಹೊತ್ತಲ್ಲಿ ಆದಷ್ಟು ಸ್ಥಳೀಯ ಅಂಗಡಿಗಳಲ್ಲಿಯೇ ಅಗತ್ಯ ಸಾಮಗ್ರಿ ಖರೀದಿ ಮಾಡಿ. ಅಗತ್ಯ ಬಿದ್ದರೆ, ಅನಿವಾರ್ಯ ಸಂದರ್ಭದಲ್ಲಿ ವಾಹನ ಉಪಯೋಗಿಸಿ. ವೃದ್ಧರು, ಅಸಹಾಯಕರು ವಾಹನ ಬಳಸಲು ಅನುವು ಮಾಡಲಾಗುವುದು. ಆದರೆ, ಹತ್ತು ಗಂಟೆ ಒಳಗೆ ಮನೆ ಸೇರಬೇಕು ಎಂದು ತಿಳಿಸಿದ್ದಾರೆ.

ಆದರೆ, ವಾಹನ ಉಪಯೋಗಿಸಿ ಯಾವುದೇ ಆಹಾರ ಪಾರ್ಸೆಲ್ ಮಾಡಲು ಅವಕಾಶ ಇರುವುದಿಲ್ಲ. ಬೆಳಗ್ಗಿನ ಹೊತ್ತಲ್ಲಿ ಸಾಮಗ್ರಿ ಖರೀದಿಗೆ ಮಾತ್ರ ವಾಹನ ಬಳಕೆ ಮಾಡಬಹುದು, ಅದು ಅನಿವಾರ್ಯ ಆದರೆ ಮಾತ್ರ. ಉಳಿದಂತೆ ಯಾರು ಕೂಡ ವಾಹನವನ್ನು ರಸ್ತೆಗೆ ಇಳಿಸುವಂತಿಲ್ಲ. ಇನ್ನು ಸರಕಾರ ಅನುಮತಿ ನೀಡಿರುವ ಕೈಗಾರಿಕೆಗಳಿಗೆ ಕೆಲಸಕ್ಕೆ ತೆರಳುವ ಮಂದಿ ತಮ್ಮ ಐಡಿ ತೋರಿಸಿ, ಖಾಸಗಿ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಇದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ನಗರ ಪ್ರದೇಶ ಹೊರತುಪಡಿಸಿ, ಇತರ ಕಡೆಗಳಲ್ಲಿ ದಿನಸಿ ಅಂಗಡಿಯಾಗಲೀ, ತರಕಾರಿ ಅಂಗಡಿಯಾಗಲೀ ಅಷ್ಟು ಅಕ್ಕ ಪಕ್ಕ ಇರುವುದಿಲ್ಲ. ಮಂಗಳೂರು ಸಿಟಿಯನ್ನು ಬಿಟ್ಟರೆ ಹೊರವಲಯಕ್ಕೆ ತೆರಳಿದರೆ, ಮೂರ್ನಾಲ್ಕು ಕಿಮೀ ನಡೆದು ಹೋಗಲೇಬೇಕಾದ ಅನಿವಾರ್ಯತೆ ಇದೆ. ಯೆಯ್ಯಾಡಿ ಒಳಭಾಗ, ಶಕ್ತಿನಗರ ಒಳಪ್ರದೇಶ, ಕಾವೂರು ಭಾಗ, ಅಡ್ಯಾರ್ ಒಳಭಾಗ, ಮುಳಿಹಿತ್ಲು ತೊಕ್ಕೊಟ್ಟು ಪೇಟೆ ಹೊರತುಪಡಿಸಿ ಉಳ್ಳಾಲ, ದೇರಳಕಟ್ಟೆ, ಸೋಮೇಶ್ವರ, ಕೋಟೆಕಾರು ಹೀಗೆ ಹೆಚ್ಚಿನ ಕಡೆಗಳಲ್ಲಿ ದಿನಸಿ ಅಂಗಡಿ ಇದ್ದರೆ, ತರಕಾರಿ, ಮೀನು ಮಾರ್ಕೆಟ್ ಇಲ್ಲದ ಪ್ರದೇಶಗಳಿವೆ. ಆಯಾ ಭಾಗದಲ್ಲಿ ಸಣ್ಣ ಅಂಗಡಿ ಇದ್ದರೂ, ತಮಗೆ ಬೇಕಾದವು ಅಲ್ಲಿ ಸಿಗುವುದಿಲ್ಲ. ಅಡ್ಯಾರಿನ ಮಂದಿ ಫರಂಗಿಪೇಟೆಗೆ ಹೋಗಿ ಒಂದಷ್ಟು ಖರೀದಿ ಮಾಡಬೇಕಿದ್ದರೆ, ಏನು ಮಾಡಬೇಕು. 15 ದಿನ ಕಾಯಬೇಕಾ, 20 ಕೇಜಿ ಅಕ್ಕಿ ಮೂಟೆಯನ್ನು ಹೊತ್ತುಕೊಂಡು ಬರೋಕೆ ಆಗತ್ತಾ ಎಂದು ಜನರು ಪ್ರಶ್ನೆ ಮಾಡಿದ್ದರು. ಈ ರೀತಿಯ ಗೊಂದಲಗಳಿಗೆ ತಕ್ಕಮಟ್ಟಿನ ತೆರೆ ಎಳೆಯುವ ಪ್ರಯತ್ನವನ್ನು ಪೊಲೀಸ್ ಕಮಿಷನರ್ ಮಾಡಿದ್ದಾರೆ.