ಮಂಗಳೂರು: ರಾಜ್ಯದಲ್ಲಿ ಪಿಎಫ್ಐ ಮುಖಂಡರ ಮೇಲೆ ಮತ್ತೆ ಕಾರ್ಯಚರಣೆ ಮುಂದುವರಿದಿದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8ಕ್ಕೂ ಅಧಿಕ ಮಂದಿ ಪಿಎಫ್ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿ ಎಂಟು ಮಂದಿ ವಶಕ್ಕೆ ಪಡೆಯಲಾಗಿದೆ. ರಾತೋರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮತ್ತೆ ಪಿಎಫ್‌ಐ ಮುಖಂಡರಿಗೆ ಶಾಕ್ ನೀಡಿದ್ದಾರೆ. ಪ್ರತಿಭಟನೆ ಮತ್ತು ಗಲಭೆ ನಡೆಸುವ ಸಾಧ್ಯತೆ ಇರುವುದರಿಂದ ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ದಾಳಿ ನಡೆಸಿ 8ಕ್ಕೂ ಅಧಿಕ ಕಾರ್ಯಕರ್ತರನ್ನು ವಶಪಡಿಸಿಕೊಂಡಿದ್ದಾರೆ.
ಸಿಆರ್‌ಪಿಸಿ 107 ಮತ್ತು 151ರಡಿ ವಶಪಡಿಸಿಕೊಂಡ ಪಿಎಫ್ಐ ಮುಖಂಡರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಪೊಲೀಸರು ಠಾಣಾ ವ್ಯಾಪ್ತಿಯ ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರು ಮಾಡಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇರಿಸಿದ್ದಾರೆ.
